ಬ್ರಿಡ್ಜ್‌ಟೌನ್: ಇಲ್ಲಿನ ಬ್ರಿಡ್ಜ್‌ಟೌನ್, ಬಾರ್ಬಡೋಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಫೀಲ್ಡ್ ಅದಲು-ಬದಲು ವಿಚಾರಕ್ಕೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್ ಕ್ಯಾಪ್ಟನ್ ಶಾಯ್ ಹೋಪ್ ಅವರೊಂದಿಗಿನ ಭಿನ್ನಾಭಿಪ್ರಾಯಕ್ಕಾಗಿ ತಂಡದ ಸ್ಟಾರ್ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಇದೀಗ ಕೆರಿಬಿಯನ್ ಕ್ರಿಕೆಟ್ ಮ್ಯಾನೇಜ್ಮೆಂಟ್ ತಂಡದಿಂದ ಬ್ಯಾನ್ ಮಾಡಿದೆ.
ಇದನ್ನೂ ಓದಿ: ಅಂತಿಮ ವಿಧಿವಿಧಾನ ನೆರವೇರಿಸಿ ಕಾರನ್ನು ಸಮಾಧಿ ಮಾಡಿದ ಕುಟುಂಬ! ಕಾರಣ ಕೇಳಿದ್ರೆ ಮನಕಲಕುತ್ತೆ | Car Samadhi
ಮೂರು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳಲು ಕೆರಿಬಿಯನ್ ಪಡೆ ಭಾರೀ ಪೈಪೋಟಿಗೆ ಇಳಿದಿತ್ತು. ಈ ವೇಳೆ ಬುಧವಾರ (ನ.06) ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ, ಮೈದಾನದಲ್ಲೇ ಟೀಮ್ ಕ್ಯಾಪ್ಟನ್ ಶಾಯ್ ಅವರೊಂದಿಗೆ ಜೋಸೆಫ್ ವಾಗ್ವಾದಕ್ಕಿಳಿದರು. ಕೆಲ ಕಾಲ ತೀವ್ರ ಜಟಾಪಟಿ ನಡೆಸಿದ ಅವರಿಗೆ ಅಂಪೈರ್ ಸಮಾಧಾನ ಹೇಳುವ ಪ್ರಯತ್ನ ಮಾಡಿದ್ದೇ ಆದರೂ ಆಲ್ಜಾರಿ ಮಾತ್ರ ಮಾತಿಗೆ ಲಗಾಮು ಹಾಕಲಿಲ್ಲ. ಇದು ಕ್ರಿಕೆಟ್ ಪ್ರಿಯರಲ್ಲಿ ಭಾರೀ ಗೊಂದಲ ಮೂಡಿಸಿತು.
"ಅಲ್ಜಾರಿ ಅವರ ನಡವಳಿಕೆಯು ವೆಸ್ಟ್ ಇಂಡೀಸ್ ಕ್ರಿಕೆಟ್ ಎತ್ತಿಹಿಡಿಯುವ ಪ್ರಮುಖ ಮೌಲ್ಯಗಳೊಂದಿಗೆ ಹೊಂದಿಕೆಯಾಗಿಲ್ಲ. ಇದು ತಪ್ಪು. ಈ ರೀತಿಯ ನಡವಳಿಕೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಮತ್ತು ಅದಕ್ಕೆ ಸೂಕ್ತ ಕ್ರಮವನ್ನು ನಾವು ಜರುಗಿಸಲೇಬೇಕು. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಸರಣಿಯ ಎರಡು ಪಂದ್ಯಗಳಿಂದ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಅಮಾನತುಗೊಳಿಸಿದ್ದೇವೆ" ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್‌ನ ನಿರ್ದೇಶಕರಾದ ಮೈಲ್ಸ್ ಬಾಸ್ಕೊಂಬೆ ತಿಳಿಸಿದ್ದಾರೆ. ತನ್ನ ನಡೆಯಿಂದ ತಂಡಕ್ಕೆ ಕಪ್ಪುಚುಕ್ಕೆ ನೀಡಿದಂತಾಯಿತು ಎಂದು ಬೇಸರ ಹೊರಹಾಕಿದ ಜೋಸೆಫ್, ಈ ಕುರಿತು ಮ್ಯಾನೇಜ್ಮೆಂಟ್ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).