ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ (Border-Gavaskar Trophy) ಟೆಸ್ಟ್ ಸರಣಿ ಯ ಮೂರನೇ ಪಂದ್ಯವು ಮಳೆಯಿಂದಾಗಿ ಡ್ರಾಗೊಂಡಿದ್ದು, ಉಭಯ ತಂಡಗಳು ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (World Test Championship) ಫಿನಾಲೆ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದುಕೊಂಡಿತ್ತಾದರು ಮಳೆಯಿಂದ ಡ್ರಾಗೊಂಡ ಪರಿಣಾಮ ಉಭಯ ತಂಡಗಳು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿವೆ.
ಹಾಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ಮೊದಲ ಪಂದ್ಯ ಹೊರತುಪಡಿಸಿದರೆ ಉಳಿದ ಮ್ಯಾಚ್ಗಳಲ್ಲಿ ಭಾರತದ ಬ್ಯಾಟರ್ಗಳು ಹೇಳಿಕೊಳ್ಳುವಂತಹ ಪ್ರದರ್ಶವನ್ನು ನೀಡಿಲ್ಲ. ಬೌಲಿಂಗ್ ವಿಚಾರಕ್ಕೆ ಬರುವುದಾದರೆ ಬುಮ್ರಾಗೆ ಸಮರ್ಥವಾಗಿ ಉಳಿದ ಬೌಲರ್ಗಳು ಸಾಥ್ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳು ಆಡಳಿತ ಮಂಡಳಿಯ ನಿದ್ದೆ ಕೆಡಿಸಿರುವ ನಡುವೆಯೇ ತಂಡಕ್ಕೆ ಅನುಭವಿ ವೇಗಿಯ ಅವಶ್ಯಕತೆ ಬಗ್ಗೆ ಕ್ರೀಡಾ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಮೊಹಮ್ಮದ್ ಶಮಿ (Mohammed Shami) ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹ ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಆಡಿರುವ ಮಾತುಗಳು ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.
ದಿ ಗಾಬಾ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮ (Rohit Sharma), ಶಮಿ ಅವರ ಫಿಟ್ನೆಸ್ಗೆ ಸಂಬಂಧಿಸಿದಂತೆ ಎನ್ಸಿಎಯಿಂದ ಸ್ಪಷ್ಟ ಮಾಹಿತಿ ಲಭ್ಯವಾಗುವವರೆಗೂ ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುವ ಕೆಲಸವನ್ನು ನಾವು ಮಾಡುವುದಿಲ್ಲ. ಎನ್ಸಿಎಯಲ್ಲಿ ಶಮಿ (Mohammed Shami) ಪುನರ್ವಸತಿಗೆ ಒಳಗಾಗಿದ್ದು, ಅಲ್ಲಿಯವರು ಈ ಬಗ್ಗೆ ಮಾಹಿತಿ ನೀಡಬೇಕಿದೆ.
ಪ್ರಸ್ತುತ ಶಮಿ ದೇಶೀಯ ಟೂರ್ನಿಗಳಲ್ಲಿ ಆಡುತ್ತಿದ್ದು, ಅವರ ಮೊಣಕಾಲಿನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ವರದಿಗಳು ಪ್ರಕಟವಾಗಿದೆ. ಹೀಗಿರುವಾಗ ನಾವವು ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುವ ಅಪಾಯಕ್ಕೆ ಕೈ ಹಾಕುವುದಿಲ್ಲ. ಶಮಿ ಶೇ. 100ರಷ್ಟು ಫಿಟ್ ಆಗಿದ್ದಾರೆ ಎಂದು ಖಚಿತವಾದ ಬಳಿಕ ಮಾತ್ರವೇ ನಾವು ತಂಡದಲ್ಲಿ ಆಡಿಸುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಹೇಳಿದ್ದಾರೆ.