ಕ್ರೀಡೆ

ಬಿನ್ನಿ, ಯೂಸುಫ್​, ಯುವಿ​ ಸ್ಫೋಟಕ ಆಟ: ಸಮಿಫೈನಲ್​ ಪ್ರವೇಶಿಸಿದ ಭಾರತ ಪಾಕ್​ ವಿರುದ್ಧ ಆಡುತ್ತಾ? WCL 2025

WCL 2025 : ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡವು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025ರ ಸೀಸನ್‌ನಲ್ಲಿ ಸೆಮಿಫೈನಲ್ ತಲುಪಿದೆ. ಮಂಗಳವಾರ (ಜುಲೈ 29) ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತು.

ಸೆಮಿಫೈನಲ್ ಪ್ರವೇಶಿಸಲು ವೆಸ್ಟ್ ಇಂಡೀಸ್ ನಿಗದಿಪಡಿಸಿದ ಗುರಿಯನ್ನು 14.1 ಓವರ್‌ಗಳಲ್ಲಿ ಭಾರತ ಬೆನ್ನಟ್ಟಬೇಕಾಯಿತು. ಆದಾಗ್ಯೂ, ಬ್ಯಾಟ್ಸ್‌ಮನ್‌ಗಳು ಅಬ್ಬರದ ಪ್ರದರ್ಶನ ನೀಡಿದ್ದರಿಂದ, ಭಾರತವು 13.2 ಓವರ್‌ಗಳಲ್ಲಿ ಗುರಿಯನ್ನು ಸಾಧಿಸಿ ಹೆಮ್ಮೆಯಿಂದ ಸೆಮಿಫೈನಲ್ ಪ್ರವೇಶಿಸಿತು.

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿತು. ಕೀರನ್ ಪೊಲಾರ್ಡ್ (ಔಟಾಗದೆ 74 ರನ್, 43 ಎಸೆತ, 3 ಬೌಂಡರಿ, 8 ಸಿಕ್ಸರ್) ಅಬ್ಬರದ ಬ್ಯಾಟಿಂಗ್​ನಿಂದ ಮಿಂಚಿದರು. ಆದರೆ, ತಂಡದ ಉಳಿದ ಆಟಗಾರರು ವಿಫಲರಾದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 144 ರನ್ ಗಳಿಸಿತು. ಪೊಲಾರ್ಡ್ ಬಿಟ್ಟರೆ ಡ್ವೈನ್​ ಸ್ಮಿರ್​ 20 ರನ್​ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ, ಬೇರೆ ಯಾರೂ ಎರಡಂಕಿಯಲ್ಲಿ ಸ್ಕೋರ್ ಮಾಡಲಿಲ್ಲ. ಆದ್ದರಿಂದ, ವಿಂಡೀಸ್ ಸಾಧಾರಣ ಸ್ಕೋರ್‌ಗೆ ಸೀಮಿತವಾಯಿತು. ಭಾರತೀಯ ಬೌಲರ್‌ಗಳಲ್ಲಿ, ಪಿಯೂಷ್ ಚಾವ್ಲಾ ಮೂರು ವಿಕೆಟ್ ಪಡೆದರೆ, ವರುಣ್ ಆರನ್ ಮತ್ತು ಸ್ಟುವರ್ಟ್ ಬಿನ್ನಿ ತಲಾ ಎರಡು ವಿಕೆಟ್ ಪಡೆದರು. ಪವನ್ ನೇಗಿ ಒಂದು ವಿಕೆಟ್ ಪಡೆದರು.

ಇದಾದ ಬಳಿಕ ಭಾರತ ಗುರಿ ಬೆನ್ನತ್ತಿತು. ಆರಂಭಿಕರಾದ ರಾಬಿನ್ ಉತ್ತಪ್ಪ (8), ಸುರೇಶ್ ರೈನಾ (7) ಮತ್ತು ಗುರುಕೀರತ್ ಸಿಂಗ್ ಮಾನ್ (7) ವಿಫಲರಾದರು. ಆದರೆ, ಸ್ಟುವರ್ಟ್ ಬಿನ್ನಿ (ಅಜೇಯ 50 ರನ್​, 21 ಎಸೆತ, 3 ಬೌಂಡರಿ, 4 ಸಿಕ್ಸರ್), ಯುವರಾಜ್ ಸಿಂಗ್ (21 ರನ್​, 11 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಯೂಸುಫ್ ಪಠಾಣ್ (ಅಜೇಯ 21 ರನ್​, 7 ಎಸೆತ 1 ಬೌಂಡರಿ, 2 ಸಿಕ್ಸರ್) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಭಾರತ 13.2 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 145 ರನ್‌ಗಳ ಗುರಿಯನ್ನು ತಲುಪಿತು. ವೆಸ್ಟ್ ಇಂಡೀಸ್ ಬೌಲರ್‌ಗಳಲ್ಲಿ, ಸ್ಮಿತ್ ಮತ್ತು ಬ್ರಾವೋ ತಲಾ ಎರಡು ವಿಕೆಟ್ ಪಡೆದರು.

ಪಾಕ್​ ವಿರುದ್ಧ ಭಾರತ ಆಡುತ್ತಾ?

ವಿಂಡೀಸ್ ವಿರುದ್ಧದ ಭಾರಿ ಗೆಲುವಿನೊಂದಿಗೆ ತನ್ನ ನಿವ್ವಳ ರನ್ ರೇಟ್ ಅನ್ನು ಸುಧಾರಿಸಿಕೊಂಡ ಭಾರತ, ನಾಲ್ಕನೇ ಸ್ಥಾನದಲ್ಲಿ ಸೆಮಿಫೈನಲ್ ಪ್ರವೇಶಿಸಿತು. ಇದೇ ಸಂದರ್ಭದಲ್ಲಿ ಭಾರತವು ಸೆಮಿಫೈನಲ್‌ನಲ್ಲಿ ಟೇಬಲ್-ಟಾಪರ್ ಪಾಕಿಸ್ತಾನವನ್ನು ಎದುರಿಸಲಿದೆ. ಆದಾಗ್ಯೂ, ಈ ಪಂದ್ಯ ನಡೆಯುತ್ತದೆಯೇ? ಅಥವಾ ಇಲ್ಲವೇ? ಪ್ರಸ್ತುತ ಸಂದೇಹದಲ್ಲಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ಋತುವಿನ ಲೀಗ್ ಹಂತದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡಲು ನಿರಾಕರಿಸಿದರು. ಈ ಕಾರಣದಿಂದಾಗಿ, ಪಂದ್ಯವನ್ನು ರದ್ದುಗೊಳಿಸಲಾಯಿತು ಮತ್ತು ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಈ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಎದುರಾಳಿಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಾರೆಯೇ? ಸದ್ಯಕ್ಕೆ ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)