ಕ್ರೀಡೆ

2007ರ ಟಿ20 ವಿಶ್ವಕಪ್‌ ಸೀನ್​ ರಿಪೀಟ್​: ವಿಂಡೀಸ್​ ಲೆಜೆಂಡ್ಸ್​ ವಿರುದ್ಧ ಬೌಲ್​ ಔಟ್​ನಲ್ಲಿ ಗೆದ್ದ ದಕ್ಷಿಣ ಆಫ್ರಿಕಾ! WCL

WCL : 2007ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬೌಲ್-ಔಟ್ ಅನ್ನು ಯಾವುದೇ ಸಾಮಾನ್ಯ ಕ್ರಿಕೆಟ್ ಅಭಿಮಾನಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಟೈ ಆದ ಪಂದ್ಯವನ್ನು ಟೀಮ್​ ಇಂಡಿಯಾ ಬೌಲ್-ಔಟ್ ನಿಯಮದ ಮೂಲಕ ಗೆದ್ದಿತು. ಇದೀಗ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್-2025 ರಲ್ಲಿ ಇದೇ ರೀತಿಯ ದೃಶ್ಯ ಪುನರಾವರ್ತನೆಯಾಗಿದೆ.

ಈ ಪಂದ್ಯಾವಳಿಯ ಭಾಗವಾಗಿ, ಶನಿವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧದ ಪಂದ್ಯವನ್ನು ದಕ್ಷಿಣ ಆಫ್ರಿಕಾ ಬೌಲ್​ ಔಟ್​ ಮೂಲಕ ಗೆದ್ದುಕೊಂಡಿತು. ಮಳೆಯಿಂದಾಗಿ ಪಂದ್ಯವನ್ನು 11 ಓವರ್‌ಗಳಿಗೆ ಮೊಟಕುಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 79 ರನ್ ಗಳಿಸಿತು.

ನಾಯಕ ಕ್ರಿಸ್ ಗೇಲ್ (2) ಮತ್ತು ಕೈರನ್​ ಪೊಲಾರ್ಡ್ (0) ಅವರಂತಹ ಸ್ಟಾರ್ ಆಟಗಾರರು ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ನಿರಾಶೆ ಮೂಡಿಸಿದರು. ಲೆಂಡ್ಲ್ ಸಿಮನ್ಸ್ (28) ಟಾಪ್ ಸ್ಕೋರರ್ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ಪರ ಆ್ಯರನ್​ ಫಾಂಗಿಸೊ ಎರಡು ವಿಕೆಟ್ ಪಡೆದರೆ, ಹಾರ್ಡಸ್​ ವಿಲ್ಜೋಯೆನ್, ಜೆಜೆ ಸ್ಮಟ್ಸ್ ಮತ್ತು ಡುವಾನೆ ಆಲಿವರ್ ತಲಾ ಒಂದು ವಿಕೆಟ್ ಪಡೆದರು.

80 ರನ್​ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ನಿಗದಿತ ಓವರ್‌ಗಳಲ್ಲಿ 80 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದರಿಂದ ಪಂದ್ಯವು ಟೈ ಆಯಿತು. ತಂಡದ ಪರ ಸರೆಲ್​ ಎರ್ವಿ (27) ಹಾಗೂ ಜೆಪಿ ಡುಮಿನಿ (25) ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ವಿಂಡೀಸ್​ ಪರ ಶೆಲ್ಡನ್​ ಕಾಟ್ರೆಲ್​ ಹಾಗೂ ಫಿಡೆಲ್​ ಎಡ್ವರ್ಡ್ಸ್​ ತಲಾ ಎರಡು ವಿಕೆಟ್​ ಪಡೆದರೆ, ಸುಲೆಮಾನ್​ ಬೆನ್​ ಒಂದು ವಿಕೆಟ್​ ಪಡೆದರು.

ಟೈ ಆದ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಅಂಪೈರ್‌ಗಳು ಬೌಲ್-ಔಟ್ ವಿಧಾನವನ್ನು ಆರಿಸಿಕೊಂಡರು. ದಕ್ಷಿಣ ಆಫ್ರಿಕಾ ಆರು ಎಸೆತಗಳಲ್ಲಿ ಎರಡು ಬಾರಿ ಬೋಲ್ಡ್​ ಮಾಡಿದರು. ಆದರೆ, ವೆಸ್ಟ್ ಇಂಡೀಸ್ ತಂಡ ಒಂದೇ ಒಂದು ಬೋಲ್ಡ್​ ಮಾಡಲು ಕೂಡ ಸಾಧ್ಯವಾಗಲಿಲ್ಲ. ಇದರಿಂದ ದಕ್ಷಿಣ ಆಫ್ರಿಕಾ ಜಯಭೇರಿ ಬಾರಿಸಿತು.

ಇದೇ ಸಂದರ್ಭದಲ್ಲಿ ಹಲವು ವರ್ಷಗಳ ನಂತರ ವೃತ್ತಿಪರ ಕ್ರಿಕೆಟ್ ಆಡಿದ ದಕ್ಷಿಣ ಆಫ್ರಿಕಾ ದಂತಕಥೆ ಎಬಿ ಡಿವಿಲಿಯರ್ಸ್ ಕೇವಲ 3 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು. (ಏಜೆನ್ಸೀಸ್​)