ಕ್ರೀಡೆ

ನವರಾತ್ರಿ ಬಳಿಕ ಕಾಳಿ ಪೂಜೆ ಅಡ್ಡಿ, ವಿಶ್ವಕಪ್​ನಲ್ಲಿ ಪಾಕಿಸ್ತಾನದ ಮತ್ತೊಂದು ಪಂದ್ಯದ ದಿನಾಂಕ ಬದಲು?

ಕೋಲ್ಕತ/ನವದೆಹಲಿ: ನವರಾತ್ರಿಯ ಮೊದಲ ದಿನದಿಂದಾಗಿ ಅಹಮದಾಬಾದ್​ನಲ್ಲಿ ಅಕ್ಟೋಬರ್​ 15ರಂದು ನಿಗದಿಯಾಗಿದ್ದ ಪಂದ್ಯ ಒಂದು ದಿನ ಮುಂಚಿತವಾಗಿ ನಡೆಯುವುದು ಈಗಾಗಲೆ ಬಹುತೇಕ ಖಚಿತಗೊಂಡಿದೆ. ಇದರ ನಡುವೆ ಈಗ ಪಾಕಿಸ್ತಾನ ತಂಡದ ಮತ್ತೊಂದು ಪಂದ್ಯದ ದಿನಾಂಕವನ್ನೂ ಬದಲಾಯಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮತ್ತು ಐಸಿಸಿಗೆ ಎದುರಾಗಿದೆ. ವಿಶ್ವಕಪ್​ನಲ್ಲಿ ಪಾಕಿಸ್ತಾನ ಮತ್ತು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ನಡುವಿನ ಪಂದ್ಯ ನವೆಂಬರ್​ 12ಕ್ಕೆ ಕೋಲ್ಕತದ ಈಡನ್​ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ. ಅದೇ ದಿನ ಕೋಲ್ಕತದಲ್ಲಿ ಕಾಳಿ ಪೂಜೆ ನಡೆಯಲಿದ್ದು, ಪಂದ್ಯಕ್ಕೆ ಭದ್ರತಾ ಕಳವಳ ಎದುರಾಗಿರುವ ಬಗ್ಗೆ ಆತಿಥೇಯ ಬಂಗಾಳ ಕ್ರಿಕೆಟ್​ ಸಂಸ್ಥೆ ಮಾಹಿತಿ ನೀಡಿದೆ.

ಒಂದು ವೇಳೆ ಈ ಪಂದ್ಯದ ದಿನಾಂಕ ಬದಲಾವಣೆ ಮಾಡಿದರೆ, ವಿಶ್ವಕಪ್​ನಲ್ಲಿ ಪಾಕಿಸ್ತಾನದ 3ನೇ ಪಂದ್ಯದ ದಿನಾಂಕ ಬದಲಾವಣೆ ಕಂಡಂತಾಗುತ್ತದೆ. ಈಗಾಗಲೆ ಭಾರತ-ಪಾಕ್​ ಪಂದ್ಯದ ದಿನಾಂಕ ಬದಲಾವಣೆಯಿಂದ ಪಾಕ್​ ತಂಡ ಶ್ರೀಲಂಕಾ ವಿರುದ್ಧ ಅಕ್ಟೋಬರ್​ 12ರಂದು ಹೈದರಾಬಾದ್​ನಲ್ಲಿ ನಿಗದಿಯಾಗಿರುವ ಪಂದ್ಯವನ್ನು ಅಕ್ಟೋಬರ್​ 10ರಂದೇ ಆಡುವ ನಿರೀಕ್ಷೆ ಇದೆ.

ಕಾಳಿ ಪೂಜೆ ಪಶ್ಚಿಮ ಬಂಗಾಳದ 2ನೇ ಅತಿದೊಡ್ಡ ಹಬ್ಬವಾಗಿದೆ. ಆ ದಿನ ಕೋಲ್ಕತದಲ್ಲಿ ಸಾವಿರಾರು ಸ್ಥಳಿಯ ಸಂಘಟನೆಗಳು ಪೆಂಡಾಲ್​ಗಳನ್ನು ಹಾಕಿ ಕಾಳಿದೇವಿಯ ಪೂಜೆ ಮಾಡುತ್ತವೆ ಮತ್ತು ಇವುಗಳಿಗೆ ಪೊಲೀಸ್​ ಭದ್ರತೆಯನ್ನೂ ಒದಗಿಸಲಾಗುತ್ತದೆ. ಹೀಗಾಗಿ ಅದೇ ದಿನ ಪಂದ್ಯದ ಭದ್ರತೆಗೂ ಸಿಬ್ಬಂದಿಯನ್ನು ಒದಗಿಸುವುದು ಕಷ್ಟವಾಗಲಿದೆ ಎಂದು ಕೋಲ್ಕತ ಪೊಲೀಸರು ತಿಳಿಸಿದ್ದಾರೆ.