ನವದೆಹಲಿ: ದೆಹಲಿ ಪ್ರೀಮಿಯರ್ ಲೀಗ್ನಲ್ಲಿ ಶನಿವಾರ ನಡೆದ ಪುರಾನಿ ದಿಲ್ಲಿ 6 ಮತ್ತು ಸೌತ್ ದಿಲ್ಲಿ ಸೂಪರ್ಸ್ಟಾರ್ಸ್ ನಡುವಿನ ಪಂದ್ಯದಲ್ಲಿ ಕೊನೆಯ ಒವರ್ ಬೌಲಿಂಗ್ ಮಾಡುವ ಮೂಲಕ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ಕ್ರೀಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರು.
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಂತ್ ಅವರು ಇದುವರೆಗೂ ಒಂದೇ ಒಂದು ಓವರ್ ಎಸೆದಿಲ್ಲ. ಆದರೆ, ಸೌತ್ ದಿಲ್ಲಿ ಸೂಪರ್ಸ್ಟಾರ್ಸ್ ತಂಡಕ್ಕೆ ಗೆಲುವಿಗೆ 6 ಎಸೆತಗಳಲ್ಲಿ 1 ರನ್ ಅವಶ್ಯಕತೆ ಇದ್ದಾಗ ಬೌಲಿಂಗ್ ಮಾಡಿದ ಪಂತ್ ಮೊದಲ ಎಸೆತದಲ್ಲೇ ಒಂದು ರನ್ ನೀಡಿದರು. ಈ ಪಂದ್ಯದಲ್ಲಿ ಪಂತ್, ಲೆಗ್ ಸ್ಪಿನ್ ಬೌಲಿಂಗ್ ಮಾಡಿದರು.
ಪಂತ್ ಬೌಲಿಂಗ್ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಇತ್ತೀಚೆಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕವಾದ ಗೌತಮ್ ಗಂಭೀರ್ ಅವರನ್ನು ಎಳೆದುತಂದಿದ್ದಾರೆ. ಗಂಭೀರ್ ಕೋಚ್ ಆದಾಗಿನಿಂದ ಬ್ಯಾಟ್ಸ್ಮನ್ಗಳಾದ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮ ಅವರು ಶ್ರೀಲಂಕಾ ಸರಣಿಯ ಸಂದರ್ಭದಲ್ಲಿ ಬೌಲಿಂಗ್ ಮಾಡಿದರು. ಬ್ಯಾಟ್ಸ್ಮನ್ಗಳನ್ನು ಅರೆಕಾಲಿಕ ಬೌಲರ್ ಆಗಿ ಗಂಭೀರ್ ತಯಾರು ಮಾಡುತ್ತಿದ್ದಾರೆ. ಇದೀಗ ರಿಷಭ್ ಪಂತ್ ದೆಹಲಿ ಪ್ರೀಮಿಯರ್ ಲೀಗ್ನಲ್ಲಿ ಬೌಲಿಂಗ್ ಮಾಡಿದ್ದು, ಇದು ಗೌತಮ್ ಗಂಭೀರ್ ಯುಗ, ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಕೂಡ ಬೌಲಿಂಗ್ ಮಾಡಬಹುದು ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಿಷಭ್ ಪಂತ್ ನಾಯಕತ್ವದ ಪುರಾನಿ ದಿಲ್ಲಿ 6 ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ತಂಡದ ಪರ ಅರ್ಪಿತ್ ರಾಣಾ (59), ರಿಷಭ್ ಪಂತ್ (35), ಲಲಿತ್ ಯಾದವ್ (ಅಜೇಯ 34) ಹಾಗೂ ವನ್ಷಾ ಬೇಡಿ (ಅಜೇಯ 47) ರನ್ ಕಲೆಹಾಕಿ ತಂಡ ಉತ್ತರ ರನ್ ಗಳಿಸಲು ನೆರವಾದರು. ಸೌತ್ ದಿಲ್ಲಿ ಸೂಪರ್ಸ್ಟಾರ್ಸ್ ಪರ ದಿವಿಜ್ ಮೆಹ್ರಾ, ಆಯುಷ್ ಬದೋನಿ ಮತ್ತು ಕುನ್ವಾರ್ ಬಿಧುರಿ ತಲಾ ಒಂದೊಂದು ವಿಕೆಟ್ ಪಡೆದರು.
198 ರನ್ಗಳ ಗುರಿ ಬೆನ್ನತ್ತಿದ ಸೌತ್ ದಿಲ್ಲಿ ಸೂಪರ್ಸ್ಟಾರ್ಸ್ 19.1 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 198 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ತಂಡದ ಪರ ಪ್ರಿಯಾನ್ಶಾ ಆರ್ಯ (57), ಸಾರ್ಥಕ್ ರಾಯ್ (41) ಮತ್ತು ಆಯುಷ್ ಬದೋನಿ (57) ರನ್ ಕಲೆಹಾಕಿದರು. ದಿಲ್ಲಿ ಪುರಾನಿ ತಂಡದ ಪರ ಶಿವಮ್ ಶರ್ಮ 2 ವಿಕೆಟ್ ಪಡೆದರೆ, ಪ್ರಿನ್ಸ್ ಯಾದವ್, ಆಯುಷ್ ಸಿಂಗ್, ಲಲಿತ್ ಯಾದವ್ ಹಾಗೂ ಅಂಕಿತ್ ಭದನಾ ತಲಾ ಒಂದು ವಿಕೆಟ್ ಕಬಳಿಸಿದರು. (ಏಜೆನ್ಸೀಸ್)