ಲಂಡನ್: ಭಾನುವಾರ ನಡೆದ ಆತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ಪಾಕಿಸ್ತಾನ ನಡುವಿನ 2ನೇ ಟಿ20 ಪಂದ್ಯದಲ್ಲಿ ಆಂಗ್ಲ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ ಬಾರಿಸಿದ ಸಿಕ್ಸರ್ ಕ್ರೀಡಾಭಿಮಾನಿಗಳ ಹುಬ್ಬೇರಿಸಿದೆ. ಬರೋಬ್ಬರಿ 122 ಮೀಟರ್ ದೂರದ ಸಿಕ್ಸರ್ ಸಿಡಿಸಿದ್ದು, ಕ್ರಿಕೆಟ್ ಇತಿಹಾಸದ ಅತಿದೊಡ್ಡ ಸಿಕ್ಸರ್ಗಳಲ್ಲಿ ಒಂದು ಎನ್ನಲಾಗಿದೆ.
ಲಿಯಾಮ್ ಬ್ಯಾಟ್ನಿಂದ ಸಿಡಿದ ಚೆಂಡು ಹೆಡಿಂಗ್ಲಿ ಕ್ರಿಕೆಟ್ ಕ್ರೀಡಾಂಗಣದಿಂದ ಹಾರಿ ನೇರವಾಗಿ ಪಕ್ಕದ ರಗ್ಬಿ ಮೈದಾನದಲ್ಲಿ ಲ್ಯಾಂಡ್ ಆಯಿತು. ಅಂದಹಾಗೆ ಲಿಯಾಮ್ ಬಾರಿಸಿದ 122 ಮೀಟರ್ ಸಿಕ್ಸರ್ ಅತಿದೊಡ್ಡ ಸಿಕ್ಸರ್ ಅಲ್ಲ. ಬದಲಾಗಿ ಮಾರ್ಟಿನ್ ಗುಪ್ಟಿಲ್ 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಬಾರಿಸಿದ ಸಿಕ್ಸರ್ ಈಡೆನ್ಗಾರ್ಡನ್ ಕ್ರೀಡಾಂಗಣದಿಂದ ಆಚೆಯಿರುವ ಕಾರ್ ಪಾರ್ಕಿಂಗ್ನಲ್ಲಿ ಬಿದ್ದಿತು. 127 ಮೀಟರ್ ಉದ್ದದ ಸಿಕ್ಸರ್ ಅದಾಗಿತ್ತು.
ಲಿಯಾಮ್ ಸಿಕ್ಸರ್ ವಿಶೇಷತೆ ಏನೆಂದರೆ, ಕಳೆದ ವಾರವಷ್ಟೇ 27 ವರ್ಷದ ಲಿಯಾಮ್ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಪಾಕ್ ವಿರುದ್ಧ ಕಳೆದ ಶುಕ್ರವಾರ ನಡೆದ ಮೊದಲ ಟ್ವಿ20 ಪಂದ್ಯದಲ್ಲೇ ಲಿಯಾಮ್ ಅಬ್ಬರಿಸಿದರು. ಕೇವಲ 43 ಎಸೆತಗಳಲ್ಲಿ 103 ರನ್ ಗಳಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲೂ ಅಬ್ಬರಿಸಿದ ಲಿಯಾಮ್ 122 ಮೀಟರ್ ಬಿಗ್ಗೆಸ್ಟ್ ಸಿಕ್ಸರ್ನೊಂದಿಗೆ 36 ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 201 ರನ್ ಗುರಿ ನೀಡಿತು. ಬೆನ್ನತ್ತಿದ ಪಾಕ್, ಪ ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. (ಏಜೆನ್ಸೀಸ್)