ಕ್ರೀಡೆ

PHOTO | ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಜೋಡಿಯ ಮಾಲ್ಡೀವ್ಸ್ ಬೀಚ್ ಚಿತ್ರಗಳು ವೈರಲ್

ಬೆಂಗಳೂರು: ಹೈದರಾಬಾದ್‌ನ ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ತಮಿಳುನಾಡಿನ ನಟ ವಿಷ್ಣು ವಿಶಾಲ್ ಈಗಾಗಲೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ವಿವಾಹವಾಗುವ ಯೋಜನೆಯನ್ನೂ ಹಾಕಿಕೊಳ್ಳುತ್ತಿದ್ದಾರೆ. ಈ ನಡುವೆ ಜ್ವಾಲಾ-ವಿಷ್ಣು ಜೋಡಿ ಇತ್ತೀಚೆಗೆ ಮಾಲ್ಡೀವ್ಸ್‌ಗೆ ರಜಾದಿನಗಳನ್ನು ಕಳೆಯಲು ತೆರಳಿದ್ದು, ಅಲ್ಲಿನ ಕಡಲ ಕಿನಾರೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಜ್ವಾಲಾ ಗುಟ್ಟಾ ಮತ್ತು ವಿಷ್ಣು ವಿಶಾಲ್ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಮಾಲ್ಡೀವ್ಸ್ ಬೀಚ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಮಾದಕ ಚಿತ್ರಗಳು ಸಾಕಷ್ಟು ಗಮನಸೆಳೆದಿವೆ.

ಕಳೆದೊಂದು ವರ್ಷದಿಂದ ಡೇಟಿಂಗ್ ಮಾಡುತ್ತ ಬಂದಿರುವ ಜ್ವಾಲಾ ಗುಟ್ಟಾ ಮತ್ತು ವಿಷ್ಣು ವಿಶಾಲ್ ಇಬ್ಬರೂ ವಿಚ್ಛೇದಿತರಾಗಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾ ‘ಎಫ್​ಐಆರ್’ನ ಚಿತ್ರೀಕರಣ ಮುಗಿಸಿರುವ ವಿಷ್ಣು ವಿಶಾಲ್ ಈ ನಡುವೆ ಗೆಳತಿ ಜ್ವಾಲಾ ಜತೆಗೆ ಮಾಲ್ಡೀವ್ಸ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿನ ಕಡನ ಕಿನಾರೆ ಮತ್ತು ಈಜುಕೊಳದಲ್ಲಿ ಸಾಕಷ್ಟು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

2020ರ ಸೆಪ್ಟೆಂಬರ್‌ನಲ್ಲಿ ಜ್ವಾಲಾ ಅವರ 37ನೇ ಜನ್ಮದಿನದಂದು ಇವರಿಬ್ಬರ ನಿಶ್ಚಿತಾರ್ಥವಾಗಿತ್ತು. ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತೆಯಾಗಿರುವ ಜ್ವಾಲಾ ಗುಟ್ಟಾ ಹೈದರಾಬಾದ್‌ನಲ್ಲಿ ತಮ್ಮದೇ ಆದ ಅಕಾಡೆಮಿಯನ್ನು ಆರಂಭಿಸಿದ್ದಾರೆ.