ಕ್ರೀಡೆ

ಆದಿಪುರುಷ್​ ಸಿನಿಮಾದ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ವಿಶಿಷ್ಟ ವಿಮರ್ಶೆ!

ನವದೆಹಲಿ: ಕ್ರಿಕೆಟ್​ ಮೈದಾನದಲ್ಲಿ ಸ್ಫೋಟಕ ಆಟವಾಡಿ ನಿವೃತ್ತಿ ಹೊಂದಿದ ಬಳಿಕ ಟ್ವಿಟರ್​ನಲ್ಲಿ ಚಟಾಕಿಗಳನ್ನು ಹಾರಿಸುವ ಮೂಲಕ ಗಮನಸೆಳೆಯುತ್ತ ಬಂದಿರುವ ಟೀಮ್​ ಇಂಡಿಯಾದ ಮಾಜಿ ಬ್ಯಾಟರ್​ ವೀರೇಂದ್ರ ಸೆಹ್ವಾಗ್​, ಇದೀಗ "ಆದಿಪುರುಷ್​' ಸಿನಿಮಾದ ಬಗ್ಗೆ ತಮಾಷೆಯ ವಿಮರ್ಶೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ರಾಮಾಯಣದ ಕಥೆಯನ್ನು ಹೊಂದಿರುವ ಸಿನಿಮಾ ವಿಮರ್ಶಕರಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಸೂಪರ್​ಸ್ಟಾರ್​ ಪ್ರಭಾಸ್​ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಮುಖ ಪಾತ್ರಗಳ ವೇಷಭೂಷಣ, ಗ್ರಾಫಿಕ್ಸ್​ ಮತ್ತು ಸಂಭಾಷಣೆಯ ಕಳಪೆ ಗುಣಮಟ್ಟದಿಂದ ಟೀಕೆಗಳನ್ನು ಎದುರಿಸಿದೆ. ಅಲ್ಲದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಸಿನಿಮಾ ಎಂಬ ಟೀಕೆಗೂ ಗುರಿಯಾಗಿದೆ. ಇಂಥ ನಕಾರಾತ್ಮಕ ವಿಮರ್ಶೆಗಳ ನಡುವೆ ಸೆಹ್ವಾಗ್​ ಕೂಡ ಚಿತ್ರತಂಡದ ಕಾಲೆಳೆದಿದ್ದಾರೆ.

"ಆದಿಪುರುಷ್​ ಸಿನಿಮಾ ನೋಡಿದ ಬಳಿಕ ನನಗೆ, ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎಂಬುದು ಗೊತ್ತಾಯಿತು' ಎಂದು ಸೆಹ್ವಾಗ್​ ಒಂದೇ ಸಾಲಿನಲ್ಲಿ ತಮಾಷೆಯಾಗಿ ಸಿನಿಮಾವನ್ನು ವಿಮರ್ಶಿಸಿದ್ದಾರೆ. ಪ್ರಭಾಸ್​ ಈ ಹಿಂದೆ ಅಭಿನಯಿಸಿದ್ದ ಬಾಹುಬಲಿ ಸಿನಿಮಾದ ಪಾತ್ರವನ್ನೂ ಎಳೆದುತರುವ ಮೂಲಕ ಸೆಹ್ವಾಗ್​, ಸಿನಿಮಾವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.