ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಯಾವಾಗಲೂ ಆಸಕ್ತಿದಾಯಕ ಕಾಮೆಂಟ್‌ಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಬಗ್ಗೆ ಮಾಡಿರುವ ಕಾಮೆಂಟ್ ಒಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸೆಹ್ವಾಗ್ ಅವರು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆ್ಯಡಮ್ ಗಿಲ್ ಕ್ರಿಸ್ಟ್ ಜತೆ ಇತ್ತೀಚೆಗೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಿಲ್‌ಕ್ರಿಸ್ಟ್, ಭಾರತದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಯಾವಾಗ ಆಡುತ್ತಾರೆ? ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಸೆಹ್ವಾಗ್, ವಿದೇಶಿ ಲೀಗ್‌ಗಳಲ್ಲಿ ಆಡುವುದರಿಂದ ಏನು ಪ್ರಯೋಜನ? ಟೀಂ ಇಂಡಿಯಾ ಆಟಗಾರರಿಗೆ ಅದು ಅಗತ್ಯವೇ ಇಲ್ಲ. ಅವರು ಭಾರತದಲ್ಲಿ ಸಾಕಷ್ಟು ಹಣವನ್ನು ಪಡೆಯುತ್ತಿದ್ದಾರೆ. ಮೇಲಾಗಿ ಬೇರೆ ಯಾವುದೇ ವಿದೇಶಿ ಲೀಗ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಹೆಚ್ಚು ಹಣವನ್ನು ಪಡೆಯುವುದಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
ನಾನು ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಾಗ, ಬಿಗ್ ಬ್ಯಾಷ್ ಲೀಗ್‌ನ ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿ ಲೀಗ್‌ನಲ್ಲಿ ಆಡಲು ಕೇಳಿದರು. ಸಂಭಾವನೆ ಎಷ್ಟು ಎಂದು ಕೇಳಿದೆ. ಈ ವೇಳೆ ಅವರು ನೀಡಿದ ಉತ್ತರ ನನಗೆ ನಗು ತರಿಸಿತು. ಕೇವಲ 84 ಲಕ್ಷ ರೂ. ಕೊಡುತ್ತೇನೆ ಎಂದರು. ಇಷ್ಟು ಹಣವನ್ನು ನಾನು ಒಂದು ದಿನದ ರಾತ್ರಿ ಪಾರ್ಟಿಗೆ ಪಾವತಿಸುತ್ತೇನೆ. ನಿನ್ನೆ ರಾತ್ರಿ ನಡೆದ ಪಾರ್ಟಿ ಬಿಲ್ ಕೂಡ 84 ಲಕ್ಷ ಆಗಿತ್ತು ಎಂದು ಸೆಹ್ವಾಗ್ ನಗು ಬೀರಿದರು.
ಅಂದಹಾಗೆ ಭಾರತ ತಂಡದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇದೆ. ಆದರೆ, ಬಿಸಿಸಿಐ ಅದಕ್ಕೆ ಅವಕಾಶ ನೀಡುತ್ತಿಲ್ಲ. ಅವಕಾಶ ನೀಡಿದರೆ, ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಂತಹ ಆಟಗಾರರು ಬಿಗ್ ಬ್ಯಾಷ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್, ದಕ್ಷಿಣ ಆಫ್ರಿಕಾ ಟಿ20 ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಆಸಕ್ತಿ ತೋರದಿರಬಹುದು. ಏಕೆಂದರೆ ಆ ಲೀಗ್‌ಗಳಲ್ಲಿ ಆಟಗಾರರಿಗೆ ಸಿಗುವ ಮೊತ್ತ ತೀರಾ ಕಡಿಮೆ. (ಏಜೆನ್ಸೀಸ್)