ಕ್ರೀಡೆ

ಇದು ಕೊಹ್ಲಿ ಮಾಡಿದ ಬಿಗ್​ ಮಿಸ್ಟೇಕ್​! RCB ಮಾಜಿ ಕ್ಯಾಪ್ಟನ್​ ತಪ್ಪು ಎತ್ತಿಹಿಡಿದ ವೀರೇಂದ್ರ ಸೆಹ್ವಾಗ್​

RCB: ನಿನ್ನೆ (ಏ.10) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯದಲ್ಲಿ ಕೆ.ಎಲ್​. ರಾಹುಲ್​ ಪಡೆ ಭರ್ಜರಿ ಜಯ ಸಾಧಿಸಿತು. 6 ವಿಕೆಟ್​ಗಳಿಂದ ಗೆದ್ದು ಬೀಗಿದ ಡಿಸಿ ತಂಡಕ್ಕೆ ಕನ್ನಡಿಗ ರಾಹುಲ್​ ಅವರ ಸ್ಫೋಟಕ ಬ್ಯಾಟಿಂಗ್ ದೊಡ್ಡ ಮಟ್ಟದ ಸಂಭ್ರಮಕ್ಕೆ ಕಾರಣವಾಯಿತು. ಇನ್ನು ಈ ಪಂದ್ಯದ ಸೋಲಿನ ಮೂಲಕ ಎರಡನೇ ಬಾರಿ ತವರಿನಲ್ಲಿ ಭಾರೀ ಮುಖಭಂಗ ಅನುಭವಿಸಿದ ರಜತ್ ಪಟಿದಾರ್​ ಪಡೆಗೆ, ತವರಿನಲ್ಲೇ ಯಾಕೋ ಅದೃಷ್ಟವಿಲ್ಲ ಎಂಬಂತೆ ಕಂಡುಬಂದಿದೆ.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್​, ಆರ್​ಸಿಬಿಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಓಪನಿಂಗ್​ ಬಂದ ವಿರಾಟ್​ ಕೊಹ್ಲಿ ಮತ್ತು ಫಿಲ್​ ಸಾಲ್ಟ್​, ಮೊದಲೆರೆಡು ಓವರ್​ನಲ್ಲೇ ಅಬ್ಬರದ ಬ್ಯಾಟಿಂಗ್​ ನಡೆಸಿ, ತಂಡದ ಮೊತ್ತವನ್ನು 50ರ ಗಡಿದಾಟಿಸಿದರು. ಇದು ಫ್ರಾಂಚೈಸಿ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿತು. ಸಾಲ್ಟ್ ಅಬ್ಬರದ ಬ್ಯಾಟಿಂಗ್​ ಬೆನ್ನಲ್ಲೇ ವಿರಾಟ್​ ಕೂಡ ತಮ್ಮ ಬ್ಯಾಟ್​ನಿಂದ ಅದ್ಭುತ ರನ್​ಗಳ ಮಳೆ ಹರಿಸಲು ಶುರುಮಾಡಿದರು. ಇನ್ನೇನು ತಂಡದ ಮೊತ್ತ 200ರ ಗಡಿದಾಟಲಿದೆ ಎಂಬ ಲೆಕ್ಕಾಚಾರಗಳು ಮುನ್ನೆಲೆಗೆ ಬರುವ ಮುನ್ನವೇ ಫಿಲ್​ ರನ್​ಔಟ್​ ಆಗಿ ಪೆವಿಲಿಯನ್​ಗೆ ಮರಳಿದರು.

ಈ ವಿಚಾರವನ್ನು ಮುಂದಿಟ್ಟು ವಿರಾಟ್​ ಕೊಹ್ಲಿಯನ್ನು ಟೀಕಿಸಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​, "ವಿಪ್ರಾಜ್​ ನಿಗಮ್​ ಅವರ ಬೌಲಿಂಗ್​​ನಲ್ಲಿ ವಿರಾಟ್​ ದೊಡ್ಡ ತಪ್ಪನ್ನು ಮಾಡಿದರು. ಆ ಶಾಟ್​ ಅವರು ಆಡಲೇ ಬಾರದಿತ್ತು. ಸ್ಪಿನ್ನರ್​ ಎದುರು ಕೊಹ್ಲಿ ಸಿಲುಕಿದರು. ಇದರೊಟ್ಟಿಗೆ ಫಿಲ್​ರನ್ನು ರನ್​ ಔಟ್​ ಕೂಡ ಮಾಡಿಸಿದರು. ಫಿಲ್​ ವಿಕೆಟ್​ ಹೋದ ನಂತರ ಅವರಾದರೂ ಆಡಬಹುದಿತ್ತು. ಆದ್ರೆ, ಅಲ್ಲಿಯೂ ವಿಕೆಟ್​ ಕಳೆದುಕೊಂಡರು. ಆ ರನ್​ಔಟ್​ ಆದ ನಂತರ ವಿರಾಟ್​ ಆ ಆಟದಲ್ಲಿ ಇರಲಿಲ್ಲ" ಎಂದು ಸೆಹ್ವಾಗ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).