ಕ್ರೀಡೆ

VIDEO: ವಿರಾಟ್ ಕೊಹ್ಲಿ ಅವರ ಫುಟ್‌ಬಾಲ್ ಕ್ರಾಸ್‌ಬಾರ್ ಚಾಲೆಂಜ್ ಹೇಗಿದೆ ಗೊತ್ತ?

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಫುಟ್‌ಬಾಲ್ ಅಂದರೆ ಪಂಚಪ್ರಾಣ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೊಹ್ಲಿ ಕ್ರಿಕೆಟ್‌ನಷ್ಟೇ ಅಲ್ಲ ಫುಟ್‌ಬಾಲ್‌ನಲ್ಲೂ ಪರಿಣತರು. ಇತ್ತೀಚೆಗೆ ‘ಆಕ್ಸಿಡೆಂಟಲ್ ಕ್ರಾಸ್‌ಬಾರ್ ಚಾಲೆಂಜ್’ನಲ್ಲಿ (ಗೋಲ್‌ಪೋಸ್ಟ್‌ನ ಎಡ ಅಥವಾ ಬಲ ಬದಿಯಿಂದ ಗೋಲಿನತ್ತ ಒದೆಯುವುದು) ಗೋಲು ಬಾರಿಸಲು ಕೊಹ್ಲಿ ಯತ್ನಿಸಿದ್ದಾರೆ. ಗೋಲು ಬಾರಿಸದಿದ್ದರೂ ಕೊಹ್ಲಿ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋವನ್ನು ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ತಂಡದೊಂದಿಗೆ ಅಭ್ಯಾಸದ ಅವಧಿಯಲ್ಲಿ ಕೊಹ್ಲಿ ಸಾಮಾನ್ಯವಾಗಿ ಫುಟ್‌ಬಾಲ್ ಆಡದತ್ತ ಹೆಚ್ಚು ಗಮನಹರಿಸುತ್ತಾರೆ. ಅದರಲ್ಲೂ ಐಪಿಎಲ್ ವೇಳೆಯಲ್ಲಿ ಕೊಹ್ಲಿ ಫುಟ್‌ಬಾಲ್ ಆಡುವುದು ಸಾಮಾನ್ಯವಾಗಿದೆ. ಅಲ್ಲದೆ, ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಅವರ ಆಪ್ತ ಸ್ನೇಹಿತ ಕೊಹ್ಲಿ. ವೃತ್ತಿಪರ ಆಟಗಾರರಂತೆ ಕೊಹ್ಲಿ ಕೂಡ ‘ಆಕ್ಸಿಡೆಂಟಲ್ ಕ್ರಾಸ್‌ಬಾರ್ ಚಾಲೆಂಜ್’ನಲ್ಲಿ ಗೋಲು ಬಾರಿಸಲು ಕೊಹ್ಲಿ ಪ್ರಯತ್ನ ಭಾರಿ ಗಮನಸೆಳೆದಿದೆ. ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದ್ದು, ಇದೀಗ ಮುಂಬೈನಲ್ಲಿ ಕಠಿಣ ಕ್ವಾರಂಟೈನ್‌ನಲ್ಲಿದೆ.

ಇಂಗ್ಲೆಂಡ್‌ನಲ್ಲಿ ಕೊಹ್ಲಿ ಪಡೆ ನ್ಯೂಜಿಲೆಂಡ್ ಎದುರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಾಗೂ ಇಂಗ್ಲೆಂಡ್ ಎದುರು 5 ಪಂದ್ಯಗಳ ಸರಣಿ ಆಡಲಿದೆ. ಇದರ ನಡುವೆ ಜುಲೈನಲ್ಲಿ ಭಾರತ ಎರಡನೇ ಸ್ಥರದ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.