ಕ್ರೀಡೆ

ಅ ಕಾರಣಕ್ಕೆ ಟೀಮ್ ಇಂಡಿಯಾ ಹಾಗೂ RCB ಕ್ಯಾಪ್ಟನ್ಸಿ ತೊರೆದೆ! ವಿರಾಟ್​ ಕೊಹ್ಲಿ ಮನದಾಳ | Virat Kohli

Virat Kohli: ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್​, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರ ಅಭಿಮಾನಿ ಬಳಗ, ಸಾಧನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅವರ ಬ್ಯಾಟಿಂಗ್​, ಫೀಲ್ಡಿಂಗ್ ಮತ್ತು ಆಟದಲ್ಲಿ ತೋರುವ ಉತ್ಸಾಹ ಅಭಿಮಾನಿಗಳ ಗಮನ ಸೆಳೆಯುತ್ತದೆ. ಪ್ರಸ್ತುತ ಐಪಿಎಲ್​ನಲ್ಲಿ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿರಾಟ್​, 18ನೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿ, ಆರೆಂಜ್ ಕ್ಯಾಪ್​ ಗಿಟ್ಟಿಸಿಕೊಂಡಿದ್ದಾರೆ. ​

ದಾಖಲೆಗಳ ಸರದಾರ

ಆರ್​ಸಿಬಿಗೆ ಆಸರೆಯಾಗಿರುವ ವಿರಾಟ್​ ಕೊಹ್ಲಿ, ತಮ್ಮ ಬ್ಯಾಟ್​ನಿಂದ ಅತ್ಯುತ್ತಮ ಇನ್ನಿಂಗ್ಸ್ ನೀಡುತ್ತಿದ್ದು, ಫ್ರಾಂಚೈಸಿ ಅಭಿಮಾನಿಗಳಲ್ಲಿ ಟ್ರೋಫಿ ಗೆಲುವಿನ ವಿಶ್ವಾಸ ಹೆಚ್ಚಿಸಿದ್ದಾರೆ. ಉಳಿದಿರುವ ಮೂರು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್​ಗೆ ಲಗ್ಗೆಯಿಡಲು ತುದಿಗಾಲಿನಲ್ಲಿರುವ ಮಧ್ಯೆ ಇತ್ತೀಚೆಗೆ ನಡೆದ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ವಿರಾಟ್​, ಹಲವಾರು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು.

ಅಂದು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದ ವಿರಾಟ್​, ತಂಡದ ಕಳಪೆ ಪ್ರದರ್ಶನದ ಬೆನ್ನಲ್ಲೇ ಭಾರತ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಇದೇ ಸಮಯದಲ್ಲಿ ಆರ್​ಸಿಬಿಗೂ ಕ್ಯಾಪ್ಟನ್ ಆಗಿದ್ದ ಕೊಹ್ಲಿ, ಇಲ್ಲಿಯೂ ನಾಯಕನ ಸ್ಥಾನಕ್ಕೆ ಗುಡ್​ಬೈ ಹೇಳಿದರು. ಇದು ಬಹುತೇಕರಲ್ಲಿ ಗೊಂದಲ ಹಾಗೂ ಅನುಮಾನ ಮೂಡಿಸಿತು. ಮತ್ತು ಹಲವಾರು ಊಹಾಪೋಹಗಳಿಗೂ ಕಾರಣವಾಯಿತು.

'ರನ್​ಮಷಿನ್'​ ವಿರಾಟ್​

ಈ ಕುರಿತು ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಕೊಹ್ಲಿ. "ಒಂದು ಹಂತದಲ್ಲಿ ಪರಿಸ್ಥಿತಿ ತೀರ ಕಠಿಣವಾಯಿತು. ನನ್ನ ವೃತ್ತಿಜೀವನದಲ್ಲಿ ಬಹಳಷ್ಟು ಬದಲಾವಣೆಗಳು ಸಂಭವಿಸುತ್ತಿದ್ದವು. ಆಗ ನಾನು ಏಳು-ಎಂಟು ವರ್ಷಗಳ ಕಾಲ ಟೀಮ್ ಇಂಡಿಯಾದ ಕ್ಯಾಪ್ಟನ್​ ಆಗಿದ್ದೆ. ನಾನು ಒಂಬತ್ತು ವರ್ಷಗಳ ಕಾಲ ಆರ್‌ಸಿಬಿಯನ್ನು ಮುನ್ನಡೆಸಿದೆ. ಆ ಸಮಯದಲ್ಲಿ, ನನ್ನ ಬ್ಯಾಟಿಂಗ್‌ನ ಮೇಲೂ ಭಾರಿ ನಿರೀಕ್ಷೆಗಳಿದ್ದವು. ಪ್ರತಿ ಪಂದ್ಯದಲ್ಲೂ ನಾನು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು. ನಾನು ಕ್ಯಾಪ್ಟನ್ ಆಗಿದ್ದರೂ, ಬ್ಯಾಟ್ಸ್‌ಮನ್ ಆಗಿ ಮುಂದುವರಿದರೂ ನನ್ನನ್ನು 24*7 ತೋರಿಸಲಾಗುತ್ತಿತ್ತು ಅದು ನನಗೆ ತುಂಬ ಕಷ್ಟ ಅನಿಸಿತು" ಎಂದಿದ್ದಾರೆ.

"ಆ ಪರಿಸ್ಥಿತಿ ನಿಯಂತ್ರಣ ನನ್ನ ಕೈಯಲ್ಲಿ ಇರಲಿಲ್ಲ. ಆಗ ನಾನು ಸಂತೋಷ ಅನ್ನೋದೇ ಮರೆತಿದ್ದೆ. ನನ್ನ ಸಂತೋಷಕ್ಕಾಗಿ ಏನನ್ನಾದರೂ ಮಾಡಲು ದೃಢವಾಗಿ ನಿರ್ಧರಿಸಿದೆ. ಅದಕ್ಕಾಗಿಯೇ ನಾನು ನಾಯಕತ್ವದಿಂದ ಕೆಳಗಿಳಿದೆ. ನನ್ನ ವೈಯಕ್ತಿಕ ಜೀವನದಲ್ಲಿ ನನಗೆ ಕೆಲವು ವಿಶೇಷ ಪುಟಗಳು ಬೇಕೆಂದು ನಿರ್ಧರಿಸಿ, ಕ್ಯಾಪ್ಟನ್ ಸ್ಥಾನದಿಂದ ದೂರ ಉಳಿಯುವ ನಿರ್ಧಾರ ಮಾಡಿದೆ. ನಾನು ಒಬ್ಬ ಆಟಗಾರನಾಗಿ ನನ್ನ ಕೆಲಸವನ್ನು ಮುಗಿಸಿ ಹೋಗಬೇಕು. ನನ್ನ ಆಟವನ್ನು ಟೀಕಿಸಲು ಯಾರಿಗೂ ಅವಕಾಶ ನೀಡಬಾರದು ಎಂದು ನಿರ್ಧರಿಸಿದ್ದೇನೆ" ಎಂದು ತಿಳಿಸಿದರು,(ಏಜೆನ್ಸೀಸ್).