ದುಬೈ: ಐಪಿಎಲ್ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈ ಸೂಪರ್ಕಿಂಗ್ಸ್ ತಂಡ ಎದುರಿಸುವ ಸಾಧ್ಯತೆ ಇತ್ತು. ಆದರೆ ಸಿಎಸ್ಕೆ ತಂಡದ ಸಿದ್ಧತೆಗೆ ಕರೊನಾ ವೈರಸ್ನಿಂದ ಹಿನ್ನಡೆ ಎದುರಾಗಿರುವ ಕಾರಣದಿಂದಾಗಿ ಅದರ ಬದಲು ಆರ್ಸಿಬಿ ತಂಡ ಕಣಕ್ಕಿಳಿಯುವ ನಿರೀಕ್ಷೆ ಮೂಡಿದೆ.
ಸೆಪ್ಟೆಂಬರ್ 19ರಂದು ಟೂನಿರ್ಯ ಮೊದಲ ಪಂದ್ಯದಲ್ಲಿ ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಅಗತ್ಯವಾಗಿದೆ. ಹೀಗಾಗಿ ಎಂಎಸ್ ಧೋನಿ ಗೈರಿನಲ್ಲಿ ಮತ್ತೋರ್ವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಾರಥ್ಯದ ಆರ್ಸಿಬಿ ತಂಡವನ್ನು ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಎದುರು ಆಡಿಸಲು ಪರ್ಯಾಯ ಯೋಜನೆ ಸಿದ್ಧಗೊಂಡಿದೆ.
ಟೂರ್ನಿಗೆ ಇನ್ನು 3 ವಾರಗಳಷ್ಟೇ ಬಾಕಿ ಉಳಿದಿದ್ದು, ಉಳಿದೆಲ್ಲ ತಂಡಗಳ ಅಭ್ಯಾಸ ಈಗಾಗಲೆ ಆರಂಭಗೊಂಡಿದ್ದರೂ, ಸಿಎಸ್ಕೆ ತಂಡ ಮಾತ್ರ ಇನ್ನೂ ಕ್ವಾರಂಟೈನ್ನಲ್ಲೇ ಇದೆ. ಹೀಗಾಗಿ ಸೂಕ್ತ ಸಿದ್ಧತೆಗಳಿಲ್ಲದೆ ಸಿಎಸ್ಕೆ ತಂಡ ಟೂರ್ನಿಯ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುವ ಸಾಧ್ಯತೆ ಕಡಿಮೆಯಾಗಿದೆ.
ಈ ಹಿಂದೆ ಧೋನಿ ನಿವೃತ್ತಿ ಪ್ರಕಟಿಸಿದಾಗ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರು ಸೆ. 19ರಂದು ಟಾಸ್ ವೇಳೆ ಭೇಟಿಯಾಗೋಣ ಎಂದು ಬರೆದುಕೊಂಡಿದ್ದರು. ಆದರೆ ಅವರ ಆಸೆ ಈಗ ಈಡೇರುವ ಸಾಧ್ಯತೆ ಕಡಿಮೆಯಾಗಿದೆ. 2019ರ ಆವೃತ್ತಿಯ ರನ್ನರ್ಅಪ್ ಆಗಿರುವ ಕಾರಣಕ್ಕಾಗಿ ಚೆನ್ನೈ ಸೂಪರ್ಕಿಂಗ್ಸ್ ತಂಡಕ್ಕೆ ಉದ್ಘಾಟನಾ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ ಕರೊನಾ ಪ್ರಕರಣ, ಬಿಸಿಸಿಐ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು, ಆರ್ಸಿಬಿ ತಂಡಕ್ಕೆ ಉದ್ಘಾಟನಾ ಪಂದ್ಯದಲ್ಲೇ ಆಡುವ ಅವಕಾಶ ಕಲ್ಪಿಸಿದೆ.
ಆರ್ಸಿಬಿ ತಂಡ ಈ ಮುನ್ನ 2008ರ ಚೊಚ್ಚಲ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ವಿರುದ್ಧ ಉದ್ಘಾಟನಾ ಪಂದ್ಯ ಆಡಿತ್ತು. ಬಳಿಕ 2017ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದೆದುರು ಉದ್ಘಾಟನಾ ಪಂದ್ಯವಾಡಿತ್ತು. 2019ರಲ್ಲಿ ಆರ್ಸಿಬಿ ತಂಡ 2019ರಲ್ಲೂ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಉದ್ಘಾಟನಾ ಪಂದ್ಯವಾಡಿತ್ತು. ವಿಪರ್ಯಾಸವೆಂದರೆ ಆರ್ಸಿಬಿ ಈ ಮೂರೂ ಉದ್ಘಾಟನಾ ಪಂದ್ಯಗಳಲ್ಲಿ ಸೋಲು ಕಂಡಿದೆ ಮತ್ತು ಉದ್ಘಾಟನಾ ಪಂದ್ಯವಾಡಿದ ಮೂರೂ ಟೂರ್ನಿಗಳಲ್ಲಿ ಪ್ಲೇಆಫ್ಗೇರಲು ವಿಫಲವಾಗಿದೆ.