ಕ್ರೀಡೆ

15 ವರ್ಷಗಳ ಕ್ರಿಕೆಟ್​ ವೃತ್ತಿಜೀವನದಲ್ಲಿ 510 ಕಿಲೋಮೀಟರ್​ ಓಡಿದ್ದಾರೆ ವಿರಾಟ್​ ಕೊಹ್ಲಿ!

ಬೆಂಗಳೂರು: ಟೀಮ್​ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 15 ವರ್ಷ ಪೂರೈಸಿದ ಸಂಭ್ರಮ ಕಂಡರು. 2008ರ ಆಗಸ್ಟ್​ 18ರಂದು ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯ ಆಡುವ ಮೂಲಕ 19 ವರ್ಷದ ಯುವ ಬ್ಯಾಟ್ಸ್​ಮನ್​ ಆಗಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. ಕಳೆದ 15 ವರ್ಷಗಳಲ್ಲಿ ಭಾರತ ತಂಡದ ಪರ ಮೂರೂ ಪ್ರಕಾರಗಳಲ್ಲಿ ಒಟ್ಟು 501 ಪಂದ್ಯ ಆಡಿರುವ ಕೊಹ್ಲಿ, ಈ ವೇಳೆ ರನ್​ ಗಳಿಕೆಗಾಗಿ ವಿಕೆಟ್​ ನಡುವೆ ಸುಮಾರು 510.04 ಕಿಲೋಮೀಟರ್​ ದೂರ ಓಡಿದ್ದಾರೆ!

34 ವರ್ಷದ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದುವರೆಗೆ ಒಟ್ಟಾರೆ 25,582 ರನ್​ ಸಿಡಿಸಿದ್ದಾರೆ. ಈ ಪೈಕಿ ಬೌಂಡರಿ&ಸಿಕ್ಸರ್​ಗಳ ಹೊರತಾಗಿ 13,748 ರನ್​ಗಳನ್ನು 22 ಯಾರ್ಡ್​ (20.1168 ಮೀ) ಪಿಚ್​ ನಡುವಿನ ಓಟದಿಂದಲೇ ಕಲೆಹಾಕಿದ್ದಾರೆ. ಇದಕ್ಕಾಗಿ ಅವರು ಒಟ್ಟು 276.57 ಕಿಲೋಮೀಟರ್​ ದೂರ ಓಡಿದ್ದಾರೆ. ಇದೇ ವೇಳೆ ತನ್ನ ಬ್ಯಾಟಿಂಗ್​ ಜತೆಗಾರರ 11,606 ರನ್​ಗಳಿಗೂ ಕೊಹ್ಲಿ 233.48 ಕಿಲೋಮೀಟರ್​ ದೂರ ಓಡಿದ್ದಾರೆ.

ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಗೌತಮ್​ ಗಂಭೀರ್​ ಜತೆಗೆ ಇನಿಂಗ್ಸ್​ ಆರಂಭಿಸಿದ್ದ ಕೊಹ್ಲಿ ಕೇವಲ 12 ರನ್​ ಗಳಿಸಿದ್ದರು. ಭಾರತ ತಂಡ 146 ರನ್​ಗೆ ಆಲೌಟ್​ ಆಗಿದ್ದ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಸೋಲು ಕಂಡಿತ್ತು. ಕೊಹ್ಲಿ ಇದುವರೆಗೆ 111 ಟೆಸ್ಟ್​, 275 ಏಕದಿನ ಮತ್ತು 115 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 8676, 12898 ಮತ್ತು 4008 ರನ್​ ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 29, ಏಕದಿನದಲ್ಲಿ 46 ಮತ್ತು ಟಿ20ಯಲ್ಲಿ 1 ಶತಕಗಳ ಸಹಿತ ಒಟ್ಟು 76 ಶತಕ ಸಿಡಿಸಿದ್ದಾರೆ.

83 ಸ್ಟೇಡಿಯಂಗಳಲ್ಲಿ ಆಟ

ವೃತ್ತೀಜಿವನದಲ್ಲಿ ವಿಶ್ವದೆಲ್ಲೆಡೆ 83 ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ಆಡಿರುವ ಕೊಹ್ಲಿ ಈ ಪೈಕಿ 46 ತಾಣಗಳಲ್ಲಿ ಶತಕ ಸಿಡಿಸಿದ್ದಾರೆ. ಈ ಪೈಕಿ ಅಡಿಲೇಡ್​ನಲ್ಲಿ ಗರಿಷ್ಠ 5 ಶತಕ ಸಿಡಿಸಿದ್ದಾರೆ. ಸಚಿನ್​ ತೆಂಡುಲ್ಕರ್​ 53 ಸ್ಟೇಡಿಯಂಗಳಲ್ಲಿ ಶತಕ ಸಿಡಿಸಿರುವುದು ವಿಶ್ವದಾಖಲೆ ಎನಿಸಿದೆ. ಕೊಹ್ಲಿ ಏಕದಿನ ಪಂದ್ಯ ಆಡಿರುವ ಎಲ್ಲ 9 ದೇಶಗಳಲ್ಲೂ ಕನಿಷ್ಠ ಒಂದಾದರೂ ಶತಕ ಸಿಡಿಸಿದ್ದಾರೆ. ಟೆಸ್ಟ್​ನಲ್ಲೂ ಬಾಂಗ್ಲಾದೇಶ ಹೊರತಾಗಿ ಉಳಿದ 8 ದೇಶಗಳಲ್ಲಿ ಶತಕ ಸಿಡಿಸಿದ್ದಾರೆ.

ಸಚಿನ್​ ದಾಖಲೆ ಸನಿಹ

ಸಚಿನ್​ ತೆಂಡುಲ್ಕರ್​ ಅವರ ಶತ ಶತಕಗಳ ಸಾಧನೆಯಿಂದ ಇನ್ನೂ 24 ಶತಕ ದೂರವಿರುವ ಕೊಹ್ಲಿ, ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ 49 ಶತಕ ಸಿಡಿಸಿದ ಸಚಿನ್​ ದಾಖಲೆಯನ್ನು ಮುಂದಿನ 3 ತಿಂಗಳಲ್ಲಿ ಏಷ್ಯಾಕಪ್​&ವಿಶ್ವಕಪ್​ ವೇಳೆ ಮುರಿಯುವ ನಿರೀೆ ಇದೆ. ಸಚಿನ್​ ಸಾಧನೆಯಿಂದ ಕೊಹ್ಲಿ (46) ಸದ್ಯ ಕೇವಲ 3 ಶತಕ ಹಿಂದಿದ್ದಾರೆ.