ನವದೆಹಲಿ: ಜನವರಿ 25ರಂದು ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಹೈದರಾಬಾದಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು ಸಿದ್ಧತೆಗಳು ಆರಂಭಿಸಿವೆ. ಸರಣಿಯ ಮೊದಲೆರಡು ಪಂದ್ಯಗಳಿಗೆ ಈಗಾಗಲೇ ತಂಡವನ್ನು ಪ್ರಕಟಿಸಿದೆ.
ಟೀಂ ಇಂಡಿಯಾ ಕಠಿಣ ತಯಾರಿ ನಡೆಸುತ್ತಿರುವ ಮಧ್ಯದಲ್ಲೇ ಶಾಕಿಂಗ್ ಸುದ್ದಿಯೊಂದು ಹೊರಬಂದಿದ್ದು, ತಂಡಕ್ಕೆ ಬರಸಿಡಿಲು ಬಡಿದಂತಾಗಿದೆ. ಟೀಂ ಇಂಡಿಯಾದ ಪ್ರಮುಖ ಆಟಗಾರ, ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಸರಣಿಯ ಮೊದಲೆರಡು ಪಂದ್ಯಗಳಿಂದ ದಿಢೀರ್ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಬಿಸಿಸಿಐ ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಆಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದೆ. ಆದರೆ, ಯಾವ ಕಾರಣಕ್ಕೆ ಅವರು ಮೊದಲೆರಡು ಟೆಸ್ಟ್ ಪಂದ್ಯಗಳಿಂದ ದೂರ ಉಳಿಯುತ್ತಿದ್ದಾರೆ ಎಂಬುದರ ಬಗ್ಗೆ ಕಾರಣವನ್ನು ಈವರೆಗೆ ತಿಳಿದು ಬಂದಿಲ್ಲ. ಬದಲಿ ಆಟಗಾರರನ್ನು ಬಿಸಿಸಿಐ ಇನ್ನಷ್ಟೇ ನೇಮಿಸಬೇಕಿದೆ.
ಇತ್ತೀಚಿಗೆ ಮುಕ್ತಾಯಗೊಂಡ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯ ಮೊದಲ ಪಂದ್ಯದಿಂದ ವಿರಾಟ್ ಕೊಹ್ಲಿ ದೂರ ಉಳಿದಿದ್ದರು. ಮಗಳ ಜನುಮದಿನದ ನಿಮಿತ್ತ ಕೊಹಲಿ ಸರಣಿಯ ಮೊದಲ ಪಂದ್ಯದಿಂದ ದೂರ ಉಳಿದಿದ್ದರು. ಆದರೆ, ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ದೂರ ಉಳಿಯುತ್ತಿರುವುದು ತಂಡದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.