ಕ್ರೀಡೆ

ಸಿಎಸ್​ಕೆ ಬೌಲರ್​ಗಳೇ ಹುಷಾರ್​! ವಿರಾಟ್​ ಕೊಹ್ಲಿ... ಬದ್ಧ ವೈರಿಗಳ ಪಂದ್ಯದ ಕಿಚ್ಚು ಹೆಚ್ಚಿಸಿದ ಮೊಹಮ್ಮದ್​ ಕೈಫ್​ | RCB vs CSK

RCB vs CSK: ಐಪಿಎಲ್​ 18ನೇ ಆವೃತ್ತಿಯ ಅತ್ಯಂತ ಕುತೂಹಲಕಾರಿ, ರೋಚಕತೆಗೆ ಸಾಕ್ಷಿಯಾಗುವಂತ ಪಂದ್ಯ ಇಂದು (ಮಾ.28) ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್​ ಇತಿಹಾಸದಲ್ಲಿ ಬದ್ಧ ವೈರಿ ತಂಡಗಳು ಎಂದೇ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಲಿದೆ. ಇದು ಕ್ರಿಕೆಟ್ ಅಭಿಮಾನಿಗಳ ಕಾತರವನ್ನು ಮತ್ತಷ್ಟು ದುಪ್ಪಟ್ಟಾಗಿಸಿದ್ದು, ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ.

ಸಿಎಸ್​ಕೆ ಪರ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿದರೆ, ಆರ್​ಸಿಬಿ ಪರ ವಿರಾಟ್​ ಕೊಹ್ಲಿ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ಇಬ್ಬರು ದಿಗ್ಗಜ ಕ್ರಿಕೆಟಿಗರನ್ನು ಒಂದೇ ಪಂದ್ಯದಲ್ಲಿ ಎದುರು-ಬದುರು ನೋಡಲು ಫ್ರಾಂಚೈಸಿ ಫ್ಯಾನ್ಸ್​ಗಳು ತೀವ್ರ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾ ಮಾಜಿ ಹಿರಿಯ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಮಾತನಾಡಿ, "ಸಿಎಸ್​ಕೆ ತಂಡದಲ್ಲಿ ಅಶ್ವಿನ್​, ನೂರ್​ ಮತ್ತು ಜಡೇಜಾರಂತಹ ಸ್ಪಿನ್​ ಮಾಂತ್ರಿಕರು ಇದ್ದಾರೆ. ಹೀಗಾಗಿ, ವಿರಾಟ್​ ಕೊಹ್ಲಿ ಹೆಚ್ಚು ಜಾಗರೂಕತೆಯಿಂದ ಬ್ಯಾಟ್​ ಮಾಡಬೇಕು. ಒಂದು ಬಾರಿ ಪವರ್​ ಪ್ಲೇನಲ್ಲಿ ವಿರಾಟ್​ ಅಬ್ಬರಿಸಲು ಪ್ರಾರಂಭಿಸಿದರೆ, ಚೆನ್ನೈ ವೇಗಿಗಳೇ ಬೆದರಲಿದ್ದಾರೆ" ಎಂದು ಹೇಳಿದ್ದಾರೆ.

ಬದ್ಧ ವೈರಿಗಳ ಕದನ

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಒಟ್ಟು 32 ಪಂದ್ಯಗಳ ಪೈಕಿ ಇಲ್ಲಿಯವರೆಗೆ ಆರ್​ಸಿಬಿ 11 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಅದರಲ್ಲೂ ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಪಡೆ ಎದುರು ಆರ್​ಸಿಬಿ ಗೆದ್ದಿರುವುದು ಕೇವಲ ಒಂದೇ ಒಂದು ಪಂದ್ಯ. ಅದು 2008ರಲ್ಲಿ ನಡೆದ ಲೀಗ್​ನಲ್ಲಿ ಎಂಬುದು ಇಲ್ಲಿ ಗಮನಾರ್ಹ. ಹೀಗಿರುವಾಗ ಇಂದಿನ ಪಂದ್ಯದಲ್ಲಿ ಎರಡನೇ ಬಾರಿ ಚೆನ್ನೈ ತವರಿನಲ್ಲೇ ಸಿಎಸ್​ಕೆಯನ್ನು ಆರ್​ಸಿಬಿ ಸೋಲಿಸಲಿದೆಯಾ? ಅಥವಾ ಭರ್ಜರಿ ಪೈಪೋಟಿ ಕೊಡಲಿದೆಯಾ ಎಂಬ ಪ್ರಶ್ನೆ, ಕೌತುಕ ಅಭಿಮಾನಿಗಳಲ್ಲಿ ಮೂಡಿವೆ. ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಅತಿ ದೊಡ್ಡ ಕಾಳಗ ಇಂದು ಸಂಜೆ 7:30ಕ್ಕೆ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ,(ಏಜೆನ್ಸೀಸ್).