ಕ್ರೀಡೆ

ಇವರು ನನ್ನ ತಾಯಿ ಎಂದ ಶಮಿ... ಈ ವೇಳೆ ಕೊಹ್ಲಿ ನಡೆದುಕೊಂಡ ರೀತಿಗೆ ತಲೆಬಾಗಿದ ಅಭಿಮಾನಿಗಳು! Virat Kohli

Virat Kohli : ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಕೊಹ್ಲಿ ಮೈದಾನದಲ್ಲಿದ್ದರೆ ತುಂಬಾ ಆಕ್ರಮಣಕಾರಿಯಾಗಿರುತ್ತಾರೆ. ಅದೇ ಸಮಯದಲ್ಲಿ ತಮ್ಮ ಸಹ ಆಟಗಾರರೊಂದಿಗೆ ತುಂಬಾ ಫನ್​ ಮಾಡುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಇನ್ನು ಕೊಹ್ಲಿ ಯಾರೇ ಹಿರಿಯರನ್ನು ಭೇಟಿಯಾದಾಗ, ತುಂಬಾ ವಿನಮ್ರವಾಗಿ ನಡೆದುಕೊಳ್ಳುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಚಾಂಪಿಯನ್ಸ್ ಟ್ರೋಫಿಯ ಫೈನಲ್​ ಪಂದ್ಯದ ಬಳಿಕ ನಡೆದ ಒಂದು ಘಟನೆ.

ವಿರಾಟ್​ ಕೊಹ್ಲಿ ವೃದ್ಧೆಯೊಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವೃದ್ಧೆ ಯಾರು ಎಂದು ತಿಳಿದುಕೊಳ್ಳಲು ಅನೇಕ ನೆಟ್ಟಿಗರು ಉತ್ಸುಕರಾಗಿದ್ದಾರೆ.

ಅಂದಹಾಗೆ ಭಾನುವಾರ (ಮಾರ್ಚ್​ 09) ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿತು. ಪಂದ್ಯ ಗೆದ್ದ ನಂತರ ಆಟಗಾರರು ಸಂಭ್ರಮಿಸಿದರು. ಆಟಗಾರರ ಕುಟುಂಬ ಸದಸ್ಯರು ಸಹ ಮೈದಾನಕ್ಕೆ ಬಂದು ಆಟಗಾರರ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಟೀಮ್ ಇಂಡಿಯಾ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರ ತಾಯಿ ಕೂಡ ಮೈದಾನಕ್ಕೆ ಬಂದರು.

ಶಮಿ "ನನ್ನ ತಾಯಿ" ಎಂದು ಹೇಳಿದಾಗ ಕೊಹ್ಲಿ ತಕ್ಷಣ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಶಮಿ ತಾಯಿ ಕೂಡ ಕೊಹ್ಲಿಯನ್ನು ತುಂಬಾ ಪ್ರೀತಿಯಿಂದ ಸ್ವಾಗತಿಸಿದರು. ಈ ದೃಶ್ಯ ಅಲ್ಲಿದ್ದವರ ಹೃದಯಗಳನ್ನು ಮುಟ್ಟಿತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೊಹ್ಲಿ ತಮ್ಮ ಹಿರಿಯರಿಗೆ ತೋರಿಸುವ ಗೌರವಕ್ಕಾಗಿ ಎಲ್ಲರೂ ಅವರನ್ನು ಶ್ಲಾಘಿಸುತ್ತಿದ್ದಾರೆ. ಅದರಲ್ಲೂ ಅಭಿಮಾನಿಗಳಂತೂ ಕೊಹ್ಲಿ ನಡೆಗೆ ತಲೆಬಾಗಿದ್ದು, ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಫೈನಲ್​ ಪಂದ್ಯದಲ್ಲಿ ವಿಫಲರಾದರು. ಅವರು ಎರಡು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿದರು. ಬ್ರೇಸ್‌ವೆಲ್ ಬೌಲಿಂಗ್‌ನಲ್ಲಿ ಎಲ್​ಬಿಡಬ್ಲ್ಯೂ ಆಗಿ ಔಟಾದರು. ಶಮಿ ಕೂಡ ಹೇರಳವಾಗಿ ರನ್‌ಗಳನ್ನು ನೀಡಿದರು. 9 ಓವರ್ ಬೌಲಿಂಗ್ ಮಾಡಿದ ಶಮಿ 74 ರನ್‌ಗಳನ್ನು ನೀಡಿದರು. ಅಲ್ಲೆ, ಒಂದು ವಿಕೆಟ್ ಸಹ ಪಡೆದರು.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಎಂಟು ವರ್ಷಗಳ ಬಳಿಕ ಪುನರಾರಂಭಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಭಾರತ ತಂಡ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಯಕ ರೋಹಿತ್ ಶರ್ಮ (76 ರನ್, 83 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟ ಹಾಗೂ ನಾಲ್ವರು ಸ್ಪಿನ್ನರ್‌ಗಳ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ರೋಹಿತ್ ಶರ್ಮ ಸಾರಥ್ಯದಲ್ಲಿ 12 ವರ್ಷಗಳ ಬಳಿಕ ಭಾರತ ತಂಡ ‘ಮಿನಿ ವಿಶ್ವಕಪ್’ ಗೆದ್ದುಕೊಂಡಿದೆ. ಒಟ್ಟಾರೆ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮ ಕಾಂಬಿನೇಷನ್‌ನಲ್ಲಿ ಗೆದ್ದ ಮೊದಲ ಐಸಿಸಿ ಟೂರ್ನಿ ಇದಾಗಿದೆ.

ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ಕಡಿವಾಣದ ನಡುವೆ ಬ್ಯಾಟರ್ ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್‌ಗೆ 251 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (31) ಒದಗಿಸಿದ ಬಿರುಸಿನ ಆರಂಭದ ನಡುವೆಯೂ 17 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಶ್ರೇಯಸ್ ಅಯ್ಯರ್ (48 ರನ್, 62 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (29) ಚೇಸಿಂಗ್ ಜೀವಂತವಿಟ್ಟರು. ಕೊನೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊನೆಯವರೆಗೂ ಪಂದ್ಯದಲ್ಲಿ ಹೋರಾಡಿದ ನ್ಯೂಜಿಲೆಂಡ್ ರನ್ನರ್ ಅಪ್‌ಗೆ ಸಮಾಧಾನ ಕಂಡಿದೆ.

ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತ ತಂಡ 2.24 ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಬಹುಮಾನದ ಹಣವಾಗಿ ಪಡೆಯಲಿದೆ. ಇದು ಭಾರತೀಯ ಕರೆನ್ಸಿಯಲ್ಲಿ 19.52 ಕೋಟಿ ರೂಪಾಯಿ. ರನ್ನರ್ ಅಪ್ ತಂಡವು 1.12 ಮಿಲಿಯನ್ ಡಾಲರ್‌ಗಳನ್ನು ಪಡೆಯಲಿದೆ. ಇದು ಭಾರತೀಯ ಕರೆನ್ಸಿಯಲ್ಲಿ 9.76 ಕೋಟಿ ರೂಪಾಯಿ. ಸೆಮಿಫೈನಲ್‌ನಲ್ಲಿ ಸೋತ ಪ್ರತಿ ತಂಡವು 4.88 ಕೋಟಿ ರೂ. ಪಡೆಯಲಿದೆ. ಐದನೇ ಮತ್ತು ಆರನೇ ಸ್ಥಾನ ಪಡೆದ ತಂಡಗಳು ತಲಾ 3.05 ಕೋಟಿ ರೂ. ಮತ್ತು ಏಳನೇ ಮತ್ತು ಎಂಟನೇ ಸ್ಥಾನ ಪಡೆದ ತಂಡಗಳು 1.22 ಕೋಟಿ ರೂ. ಪಡೆಯಲಿವೆ. (ಏಜೆನ್ಸೀಸ್​)