ಕ್ರೀಡೆ

ಪಂಜಾಬ್ ಕಿಂಗ್ಸ್​ ಹೀನಾಯ ಸೋಲಿಗೆ, RCB ಭರ್ಜರಿ ಗೆಲುವಿಗೆ​ ಕೊಹ್ಲಿಯೇ ಕಾರಣ! ಹೇಗೆ ಗೊತ್ತಾ? ಇಲ್ಲಿದೆ ಉತ್ತರ...​ Virat Kohli

Virat Kohli : ಐಪಿಎಲ್ ಆರಂಭದಿಂದಲೂ ತಮ್ಮ ಚೊಚ್ಚಲ ಪ್ರಶಸ್ತಿಗಾಗಿ ಹೋರಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಸೀಸನ್​ನಲ್ಲಿ ಟ್ರೋಫಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ಬೌಲರ್‌ಗಳ ಅದ್ಭುತ ಪ್ರದರ್ಶನದೊಂದಿಗೆ ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದ ಆರ್​ಸಿಬಿ, ಒಂಬತ್ತು ವರ್ಷಗಳ ನಂತರ 4ನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದೆ. ಟ್ರೋಫಿ ಎತ್ತಿಹಿಡಿಯಲು ಆರ್​ಸಿಬಿಗೆ ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಈ ಪಂದ್ಯದಲ್ಲಿ ಜೋಶ್​ ಹ್ಯಾಸಲ್‌ವುಡ್ ಅವರ ವೇಗ ಕಮಾಲ್​ ಮಾಡಿದರೆ, ಸುಯಾಶ್ ಶರ್ಮಾ ಅವರ ಗೂಗ್ಲಿ ಜಾದೂ ಮಾಡಿತು. ಆದರೆ, ಪಂಜಾಬ್​ ಕಿಂಗ್ಸ್​ ಹೀನಾಯ ಸೋಲಿಗೆ ವಿರಾಟ್​ ಕೊಹ್ಲಿ ಕೂಡ ಕಾರಣ ಎಂಬುದೇ ಅಚ್ಚರಿಯ ಸಂಗತಿ. ಅದು ಹೇಗೆ ಎಂಬ ನಿಮ್ಮೆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಆರ್​ಸಿಬಿ ತನ್ನ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ನೀಡಿರದ ಅಮೋಘ ಪ್ರದರ್ಶನವನ್ನು ನಿನ್ನೆ ನೀಡಿತು. ಬೌಲಿಂಗ್​ ಹಾಗೂ ಫೀಲ್ಡಿಂಗ್​ನಲ್ಲಿ ಎಲ್ಲರಿಗಿಂತ ಒಂದು ಕೈ ಮೇಲಿತ್ತು. ಆದರೆ, ಈ ಭರ್ಜರಿ ಪ್ರದರ್ಶನದಿಂದಿರುವ ಶಕ್ತಿ ವಿರಾಟ್​ ಕೊಹ್ಲಿ. ಹೌದು, ಹೆಚ್ಚಿನ ಒತ್ತಡದ ಪಂದ್ಯದಲ್ಲಿ ನಿನ್ನೆ ಮಾರ್ಗದರ್ಶಕರಾಗಿ ನಿಂತಿದ್ದು ಕೊಹ್ಲಿ. ತಂಡದ ಆಟಗಾರರಿಗೆ ನಿರ್ದೇಶನ ನೀಡುತ್ತಾ, ಫೀಲ್ಡಿಂಗ್​ ಅನ್ನು ಸರಿಯಾಗಿ ಹೊಂದಿಸಿದರು. ಅಲ್ಲದೆ, ಬೌಲರ್​ಗಳಿಗೆ ತಾವೇ ಖುದ್ದಾಗಿ ಹೋಗಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು. ಯಾವುದೇ ದೋಷ ಬರದಂತೆ ಬೌಲಿಂಗ್​ ಪ್ಲಾನ್​ಗಳನ್ನು ಯೋಜಿಸುತ್ತಿದ್ದರು. ಅದರ ಫಲಿತಾಂಶವೇ ನಿನ್ನೆ ಪಂದ್ಯದ ಅದ್ಭುತ ಗೆಲುವು.

ತಂಡದ ಅಧಿಕೃತ ನಾಯಕ ರಜತ್​ ಪಾಟಿದಾರ್​ ಅವರೇ ಆಗಿರಬಹುದು ಆದರೆ, ನಿನ್ನೆಯ ಪಂದ್ಯದ ಸಂಪೂರ್ಣ ಹಿಡಿತ ವಿರಾಟ್​ ಕೊಹ್ಲಿ ಬಳಿ ಇತ್ತು. ಪಂದ್ಯ ನೋಡಿದವರಿಗೆ ಇದರ ಅರಿವು ಆಗಿರುತ್ತದೆ. ಕ್ವಾಲಿಫೈಯರ್​ ಪಂದ್ಯದ ಕಂಪ್ಲೀಟ್​ ಅಧಿಕಾರವನ್ನು ಕೊಹ್ಲಿ ತೆಗೆದುಕೊಂಡಿದ್ದರು. ಆಟಗಾರರನ್ನು ಮೈದಾನದಲ್ಲಿ ನಿರ್ದೇಶಿಸುವುದು, ಅವರನ್ನು ಸರಿಯಾದ ಸೂಚನೆಗಳೊಂದಿಗೆ ಫೀಲ್ಡಿಂಗ್​ನಲ್ಲಿ​ ಹೊಂದಿಸುವುದು ಹಾಗೂ ಬೌಲರ್‌ಗಳಿಗೆ ಸರಿಯಾದ ಸಮಯದಲ್ಲಿ ಕೆಲವು ಟೆಕ್ನಿಕ್​ಗಳನ್ನು ನೀಡುವ ಮೂಲಕ ತಮ್ಮ ಅನುಭವವನ್ನು ವಿರಾಟ್​ ಕೊಹ್ಲಿ ಸರಿಯಾದ ಸಮಯಕ್ಕೆ ಬಳಸಿಕೊಂಡರು. ಇದರ ಪರಿಣಾಮ ಪಂಜಾಬ್​ ಕಿಂಗ್ಸ್​ ಬ್ಯಾಟಿಂಗ್​ ಕ್ರಮಾಂಕ ತರಗೆಲೆಗಳಂತೆ ಉದುರಿ ಹೋದವು.

ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್​ಸಿಬಿ ಬೌಲರ್‌ಗಳ ಅಬ್ಬರದಿಂದ ಪಂಜಾಬ್ ಆರಂಭದಿಂದಲೇ ತೀವ್ರ ಸಂಕಷ್ಟದಲ್ಲಿ ಸಿಲುಕಿತು. 50 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. ಒಬ್ಬ ಬ್ಯಾಟ್ಸ್‌ಮನ್ ಕೂಡ 26 ರನ್‌ಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಆ ತಂಡದಲ್ಲಿ ಅತಿ ಹೆಚ್ಚು ಸ್ಕೋರರ್ ಸ್ಟೊಯಿನಿಸ್. ಅವರು 26 ರನ್ ಗಳಿಸಿದರು. ಪಂಜಾಬ್ ಸತತ ವಿಕೆಟ್‌ಗಳನ್ನು ಕಳೆದುಕೊಂಡು ಅಂತಿಮವಾಗಿ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು.

ಆರ್​ಸಿಬಿ ಬೌಲರ್​ಗಳು ನಿನ್ನೆ ಜಾದೂ ಮಾಡಿದರು. ಸುಯಾಶ್ ಶರ್ಮಾ ಮತ್ತು ಜೋಶ್​ ಹ್ಯಾಸಲ್‌ವುಡ್ ತಲಾ 3 ವಿಕೆಟ್ ಪಡೆದರೆ, ಯಶ್ ದಯಾಳ್ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತು ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

ಇದಾದ ಬಳಿಕ ಸಣ್ಣ ಗುರಿ ಬೆನ್ನಟ್ಟಿದ ಆರ್​ಸಿಬಿ ತಂಡ 10 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 106 ರನ್ ಗಳಿಸಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (12 ರನ್​, 2 ಬೌಂಡರಿ) ಬೇಗನೆ ಔಟಾದರು. ಫಿಲ್ ಸಾಲ್ಟ್ (ಅಜೇಯ 56 ರನ್​, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅಜೇಯ ಅರ್ಧಶತಕದೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 8 ವಿಕೆಟ್​ಗಳಿಂದ ಕ್ವಾಲಿಫೈಯರ್​ 1ರಲ್ಲಿ ಗೆದ್ದ ಆರ್​ಸಿಬಿ, 9 ವರ್ಷಗಳ ಬಳಿಕ ಐಪಿಎಲ್​ ಫೈನಲ್​ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆರ್​ಸಿಬಿ ತಂಡ ಕ್ವಾಲಿಫೈಯರ್-2 ವಿಜೇತರನ್ನು ಎದುರಿಸಲಿದೆ.

ಇದೇ ಸಂದರ್ಭದಲ್ಲಿ, 9 ವರ್ಷಗಳ ಸುದೀರ್ಘ ಅಂತರದ ನಂತರ ಆರ್‌ಸಿಬಿ ಐಪಿಎಲ್ ಫೈನಲ್ ತಲುಪಿದ್ದರಿಂದ ಅಭಿಮಾನಿಗಳು ತುಂಬಾ ಸಂತೋಷಗೊಂಡಿದ್ದು, ಸಂಭ್ರಮಿಸುತ್ತಿದ್ದಾರೆ. ಇದಲ್ಲದೆ, ಈ ವರ್ಷದ ಕಪ್ ನಮ್ಮದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ನಮ್ಮ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅವರು ಯಾವುದೇ ಎಡವಟ್ಟು ಮಾಡಿಲ್ಲ ಎಂದು ಸಂಭ್ರಮಿಸುತ್ತಿದ್ದಾರೆ. ಕಳೆದ ಏಳು ಸೀಸನ್‌ಗಳಲ್ಲಿ ಕ್ವಾಲಿಫೈಯರ್ 1ರಲ್ಲಿ ಗೆದ್ದ ತಂಡ ಕಪ್ ಗೆದ್ದಿದೆ. ಈ ಭಾವನೆಯ ಪ್ರಕಾರ, ಆರ್‌ಸಿಬಿ ಈ ಬಾರಿ ಪ್ರಶಸ್ತಿ ಗೆಲ್ಲುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಮಾತು ನಿಜವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)