ಕ್ರೀಡೆ

ಮದುವೆಯ ಮೂಲಕ ಸಚಿನ್, ಕೊಹ್ಲಿ, ಪಾಂಡ್ಯ, ಧವನ್ ಸಾಲಿಗೆ ಸೇರಿದ ಬುಮ್ರಾ!

ಬೆಂಗಳೂರು: ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಸೋಮವಾರ ಗೋವಾದಲ್ಲಿ ಜನಪ್ರಿಯ ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾಗಿದ್ದಾರೆ. ಈ ಮೂಲಕ ಬುಮ್ರಾ ಅವರು ಟೀಮ್ ಇಂಡಿಯಾದ ಕೆಲ ಹಾಲಿ ಮತ್ತು ಮಾಜಿ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ. ಈ ಕ್ರಿಕೆಟಿಗರೆಲ್ಲರೂ ತಮಗಿಂತ ಹಿರಿಯ ಮಹಿಳೆಯನ್ನು ವಿವಾಹವಾಗಿರುವವರು!

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಅಜಿತ್ ಅಗರ್ಕರ್ ಮತ್ತು ಟೀಮ್ ಇಂಡಿಯಾದ ಹಾಲಿ ಸಹ-ಆಟಗಾರರಾದ ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಮುಂತಾದ ತಮಗಿಂತ ಹಿರಿಯ ಮಹಿಳೆಯರನ್ನು ವಿವಾಹವಾದ ಭಾರತೀಯ ಕ್ರಿಕೆಟಿಗರ ಸಾಲಿಗೆ 27 ವರ್ಷದ ಬುಮ್ರಾ ಅವರೂ ಈಗ ಸೇರ್ಪಡೆಯಾಗಿದ್ದಾರೆ. 29 ವರ್ಷದ ಸಂಜನಾ ಗಣೇಶನ್, ಬುಮ್ರಾಗಿಂತ ಸುಮಾರು ಎರಡೂವರೆ ವರ್ಷ ದೊಡ್ಡವರಾಗಿದ್ದಾರೆ. ಗುಜರಾತ್ ಬೌಲರ್ ಬುಮ್ರಾ 1993ರ ಡಿಸೆಂಬರ್ 6ರಂದು ಜನಿಸಿದ್ದರೆ, ಸಂಜನಾ ಗಣೇಶನ್ 1991ರ ಮೇ 6ರಂದು ಪುಣೆಯಲ್ಲಿ ಜನಿಸಿದವರಾಗಿದ್ದಾರೆ.

ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪತ್ನಿ ಅಂಜಲಿ 6 ವರ್ಷ ದೊಡ್ಡವರಾಗಿದ್ದರೆ, ಶಿಖರ್ ಧವನ್ ಅವರ ಪತ್ನಿ ಆಯೇಷಾ ಸುಮಾರು 10 ವರ್ಷ ಹಿರಿಯರಾಗಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಪತ್ನಿ ಅನುಷ್ಕಾ ಶರ್ಮಗಿಂತ ಕೆಲ ತಿಂಗಳು ಕಿರಿಯರಾಗಿದ್ದಾರೆ. ವಿರಾಟ್ ಕೊಹ್ಲಿ 1988ರ ನವೆಂಬರ್‌ನಲ್ಲಿ ಜನಿಸಿದ್ದರೆ, ಅನುಷ್ಕಾ ಶರ್ಮ ಅದೇ ವರ್ಷ ಮೇನಲ್ಲಿ ಜನಿಸಿದವರಾಗಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗಿಂತಲೂ ಪತ್ನಿ ನತಾಶಾ ಸ್ಟಾಂಕೋವಿಕ್ ಸುಮಾರು 2 ವರ್ಷ ದೊಡ್ಡವರಾಗಿದ್ದಾರೆ.

ಟೀಮ್ ಇಂಡಿಯಾದ ವೇಗಿ ಮೊಹಮದ್ ಶಮಿ ಕೂಡ ತಮಗಿಂತ ಸುಮಾರು 10 ವರ್ಷ ದೊಡ್ಡವರಾದ ಹಸಿನ್ ಜಹಾನ್‌ರನ್ನು ವಿವಾಹವಾಗಿದ್ದರು. ಇದೀಗ ಕೌಟುಂಬಿಕ ಕಲಹದಿಂದಾಗಿ ಇವರಿಬ್ಬರು ಪ್ರತ್ಯೇಕವಾಗಿದ್ದಾರೆ ಎಂಬುದು ಬೇರೆ ಮಾತು.