ಕ್ರೀಡೆ

ಔಟಾದಾಗ ಸಂಭ್ರಮಿಸಬೇಡಿ... ಎಲ್ಲರ ಗಮನ ಸೆಳೆಯುತ್ತಿದೆ ವಿರಾಟ್​ ಕೊಹ್ಲಿಯ ಈ ವಿಡಿಯೋ

ಕೇಪ್​ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿಗೆ 79 ರನ್​ಗಳು ಬೇಕಾಗಿದ್ದು, ಈ ಗೆಲುವಿನೊಂದಿಗೆ ಹೊಸ ವರ್ಷದಲ್ಲಿ ಶುಭಾರಂಭ ಕಾಣಲು ಭಾರತ ತಂಡ ಸಜ್ಜಾಗಿದೆ. ಇನ್ನು ಪಂದ್ಯದ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ನಡೆದುಕೊಂಡಿರುವ ರೀತಿ ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದ್ದು, ಹಲವರು ಇವರ ನಡೆಯನ್ನು ಪ್ರಶಂಶಿಸಿದ್ದಾರೆ.

ಅತಿಥೇಯ ತಂಡದ ಪರ ನಾಯಕತ್ವ ವಹಿಸಿರುವ ಡೀನ್​ ಎಲ್ಗರ್​ ಅವರ ವೃತ್ತಿ ಜೀವನದ ಕೊನೆ ಪಂದ್ಯ ಇದಾಗಿದ್ದು, ಮೊದಲ ಟೆಸ್ಟ್‌ನಲ್ಲಿ ಅಮೋಘ ಶತಕ (185 ರನ್‌) ಬಾರಿಸಿ ತಂಡದ ಜಯಕ್ಕೆ ಕಾರಣರಾಗಿದ್ದ ಎಲ್ಗರ್‌, ಎರಡನೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ.

ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 4 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 12 ರನ್​ ಗಳಿಸಿದ್ದಾಗ ಮುಕೇಶ್​ ಕುಮಾರ್​ಗೆ ಡೀನ್​ ಎಲ್ಗರ್​ ವಿಕೆಟ್​ ಒಪ್ಪಿಸಿದ್ದಾರೆ. ಈ ವೇಳೆ ಸಹ ಆಟಗಾರರು ಹಾಗೂ ಅಭಿಮಾನಿಗಳಿಗೆ ಇದನ್ನು ಆಚರಿಸದಂತೆ ಮನವಿ ಮಾಡಿದ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳುತ್ತಿರುವ ಡೀನ್​ ಎಲ್ಗರ್​ಗೆ ತಲೆಬಾಗಿ ನಮಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

ಬಳಿಕ ಡೀನ್​ ಎಲ್ಗರ್​ ಬಳಿ ಓಡಿಬಂದ ವಿರಾಟ್​ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ. ಪೆವಿಲಿಯನ್​ಗೆ ತೆರಳುತ್ತಿರುವಾಗ ಭಾರತೀಯ ಆಟಗಾರರು ಹೃತ್ಪೂರ್ವಕವಾಗಿ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಮೈದಾನದಲ್ಲಿದ್ದ ಅಭಿಮಾನಿಗಳು ಹಾಗೂ ಉಭಯ ತಂಡದ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಡೀನ್​ ಎಲ್ಗರ್​ಗೆ ಶುಭಹಾರೈಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.