ದುಬೈ: ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಸಿದ್ಧತೆ ನಡುವೆಯೂ ಸಾಮಾಜಿಕ ಜಾಲತಾಣ ಜತೆಗಿನ ಒಡನಾಟ ಮಾತ್ರ ಬಿಟ್ಟಿಲ್ಲ. ದೈನಂದಿನ ಚಟುವಟಿಕೆಗಳ ಕುರಿತು ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ವಾಡಿಕೆ. ಸಹ-ಆಟಗಾರರೊಂದಿಗೆ ಈಜುಕೊಳದಲ್ಲಿ ರಿಲ್ಯಾಕ್ಸ್ ಮಾಡಿರುವ ಕೊಹ್ಲಿ, ಹಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೊಹ್ಲಿ ಈಜುಕೊಳದಲ್ಲಿರುವ ಚಿತ್ರಗಳು ಇದೀಗ ವೈರಲ್ ಆಗಿದ್ದು, ಬಾಲಿವುಡ್ ನಟರ ಗಮನಸೆಳೆದಿವೆ.
ಅಭ್ಯಾಸದ ನಡುವೆಯೂ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಕೊಹ್ಲಿ, ಬುಧವಾರ ಸಹ ಆಟಗಾರರಾದ ಕರ್ನಾಟಕದ ದೇವದತ್ ಪಡಿಕಲ್, ಪವನ್ ನೇಗಿ, ಗುರುಕೀರತ್ ಸಿಂಗ್ ಮಾನ್ ಜತೆಗೂಡಿ ಈಜುಕೊಳದಲ್ಲಿ ಕಾಲಕಳೆದಿದ್ದಾರೆ. ಕೊಹ್ಲಿ ಫೋಟೋ ವೀಕ್ಷಿಸಿದ ನಟ ವರುಣ್ ಧವನ್, ಕೊಹ್ಲಿ ದೈಹಿಕ ಸಾಮರ್ಥ್ಯಕ್ಕೆ ಮನಸೋತಿರುವ ಅವರು ‘ರಿಪ್ಡ್’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಕೊಹ್ಲಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
2015 ರಿಂದಲೂ ಆರ್‌ಸಿಬಿ ತಂಡಕ್ಕೆ ನಾಯಕನಾಗಿರುವ ಕೊಹ್ಲಿ, ಟೂರ್ನಿಯಲ್ಲಿ ಇದುವರೆಗೂ ಅತಿ ಹೆಚ್ಚು ರನ್ (5412) ಬಾರಿಸುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜತೆಗೆ 2016ರಲ್ಲಿ 4 ಶತಕ ಸೇರಿದಂತೆ 973 ರನ್ ಬಾರಿಸಿದ್ದಾರೆ. ಕೊಹ್ಲಿ ಸಾರಥ್ಯದಲ್ಲಿ ಆರ್‌ಸಿಬಿ 2016ರಲ್ಲಿ ಫೈನಲ್ ಪ್ರವೇಶಿಸಿತ್ತು. ಆರ್‌ಸಿಬಿ ಇದುವರೆಗೂ 3 ಬಾರಿ (2009, 2011, 2016) ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಜಯಿಸಲು ವಿಫಲವಾಗಿದೆ.