ಕ್ರೀಡೆ

ಆಗ ಪಾಕ್​ನ ಹ್ಯಾರಿಸ್​, ನಿನ್ನೆ ಆಫ್ಘಾನ್​ನ ನವೀನ್! ಪ್ರಯೋಗ ಯಶಸ್ವಿಯಾದ್ರೂ ಕೊಹ್ಲಿಗೆ ಇಷ್ಟವಾಗ್ಲಿಲ್ಲ ಏಕೆ?

ನವದೆಹಲಿ: ಸುದೀರ್ಘ 14 ತಿಂಗಳುಗಳ ಬಳಿಕ ವಿರಾಟ್​ ಕೊಹ್ಲಿ ಅವರು ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಮರಳಿದ್ದಾರೆ. ನಿನ್ನೆ ಆಫ್ಘಾನ್​ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 29 ರನ್​ ಬಾರಿಸುವ ಮೂಲಕ ಟಿ20 ಮಾದರಿಯಲ್ಲಿ ಹಿಂದಿನ ಪಂದ್ಯಗಳಿಗಿಂತ ಹೊಸ ಸ್ಪರ್ಶದೊಂದಿಗೆ ಕೊಹ್ಲಿ ವಿಶೇಷ ಗಮನ ಸೆಳೆದರು.

29 ರನ್​ಗಳಿಗೆ 5 ಬೌಂಡರಿ ಬಾರಿಸಿದ ಕೊಹ್ಲಿ, 2023ರ ಐಪಿಎಲ್​ ಟೂರ್ನಿಯ ವೇಳೆ ತನ್ನ ಮೇಲೆ ಹರಿಹಾಯ್ದಿದ್ದ ಆಫ್ಘಾನ್​ನ ವೇಗಿ ನವೀನ್​ ಉಲ್​ ಹಕ್ ಮೇಲೆ ಹೊಸ ರೀತಿಯ ಹೊಡೆತವನ್ನು ಪ್ರಯತ್ನಿಸಿದರು. ಈ ವಿನೂತನ ಹೊಡೆತವನ್ನು 2022 ಟಿ20 ವಿಶ್ವಕಪ್​ ಸಮಯದಲ್ಲಿ ಕೊಹ್ಲಿ ಪಾಕಿಸ್ತಾನದ ಹ್ಯಾರಿಸ್​ ರೌಫ್​ ಮೇಲೆ ಪ್ರಯೋಗ ಮಾಡಿದ್ದರು. ಆ ವೇಳೆ ಕೊಹ್ಲಿ ಬ್ಯಾಟ್​ನಿಂದ ಸಿಡಿದ ಚೆಂಡು ಆಕಾಶದ ಮೇಲೆ ಹಾರಿ ಬೌಂಡರಿ ಗೆರೆ ದಾಟಿತ್ತು. ನಿನ್ನೆ ನವೀನ್​ ಮೇಲೆ ಇದೇ ಪ್ರಯೋಗ ಮಾಡಲಾಯಿತು ಆದರೆ, ಚೆಂಡು ಬೌಂಡರಿ ಗೆರೆಯ ಹಿಂದೆಯೇ ಬಿದ್ದು ಬೌಂಡರಿಯಾಯಿತು.​

ಹ್ಯಾರಿಸ್​ ರೌಫ್​ ಶಾಟ್​ ಅನ್ನು ಕೊಹ್ಲಿ ಮರುಸೃಷ್ಟಿಸಿದ್ದಾರೆ ಎಂದು ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದಾರೆ. ಆದರೆ, ಕೊಹ್ಲಿಗೆ ತನ್ನ ಹೊಸ ಹೊಡೆತ ಇಷ್ಟವಾಗದಂತೆ ತೋರುತ್ತದೆ. ಏಕೆಂದರೆ, ಆ ಚೆಂಡು ಬೌಂಡರಿ ಬದಲು ಸಿಕ್ಸರ್​ ಆಗಬೇಕೆಂದು ಕೊಹ್ಲಿ ಬಯಸಿದ್ದರು. ಆದರೆ, ಕೊಹ್ಲಿಯ ಈ ಹೊಡೆತ ಅಭಿಮಾನಿಗಳನ್ನು ಇಂಪ್ರೆಸ್​ ಮಾಡಿದ್ದು, ಸಾಮಾಜಿಕ ತಾಣದಲ್ಲಿ ವಿಡಿಯೋ ಶೇರ್​ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಆರಂಭಿಕ ಯಶಸ್ವಿ ಜೈಸ್ವಾಲ್ (68 ರನ್, 34 ಎಸೆತ, 5 ಬೌಂಡರಿ, 6 ಸಿಕ್ಸರ್) ಹಾಗೂ ಶಿವಂ ದುಬೆ (63* ರನ್, 32 ಎಸೆತ, 5 ಬೌಂಡರಿ, 4 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ಎದುರು 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ ಒಂದು ಪಂದ್ಯ ಬಾಕಿಯಿರುವಂತೆಯೇ ರೋಹಿತ್ ಶರ್ಮ ಪಡೆ 2-0 ವಶಪಡಿಸಿಕೊಂಡಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಆಫ್ಘನ್, ಗುಲ್ಬಾದಿನ್ ನೈಬ್ (57 ರನ್, 35 ಎಸೆತ, 5 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನಡುವೆಯೂ ಭರ್ತಿ 20 ಓವರ್​ಗಳಲ್ಲಿ 172 ರನ್​ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್- ಶಿವಂ ದುಬೆ ಜತೆಯಾಟದ ಬಲದಿಂದ ಭಾರತ 4.2 ಓವರ್ ಬಾಕಿ ಇರುವಂತೆಯೇ 4 ವಿಕೆಟ್​ಗೆ 173 ರನ್​ಗಳಿಸಿ ಚೆಂಡಾಡಿದರು. (ಏಜೆನ್ಸೀಸ್​)