ಚೆನ್ನೈ; ಪ್ರವಾಸಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಮ್ ಇಂಡಿಯಾ ಸುದೀರ್ಘ ವಿರಾಮದ ಬಳಿಕ ಮರಳಿ ಕಣಕ್ಕಿಳಿಯುತ್ತಿದೆ. ಇದರೊಂದಿಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ನತ್ತ ಗಮನಹರಿಸಲಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಮ್ಮ ವೈಯಕ್ತಿಕ ದಾಖಲೆಗಳ ನಿರೀಕ್ಷೆಯಲ್ಲಿದ್ದಾರೆ. ಬಾಂಗ್ಲಾ ವಿರುದ್ಧ ಸರಣಿಯಲ್ಲಿ ದಾಖಲಾಗಬಹುದಾದ ಅಂಥ ದಾಖಲೆಗಳ ಸಂಕ್ಷಿಪ್ತ ವಿವರ ಇಲ್ಲಿದೆ...
*152: ವಿರಾಟ್ ಕೊಹ್ಲಿ (8,848) ಇನ್ನು 152 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 9 ಸಾವಿರ ರನ್ ಪೂರೈಸಿದ 4ನೇ ಬ್ಯಾಟರ್ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ (15,921), ರಾಹುಲ್ ದ್ರಾವಿಡ್ (13,288), ಸುನೀಲ್ ಗಾವಸ್ಕರ್ (10,122) ಮೊದಲ ಮೂವರು.
*6: ರವೀಂದ್ರ ಜಡೇಜಾ ಇನ್ನು 6 ವಿಕೆಟ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 3 ಸಾವಿರ ರನ್ ಮತ್ತು 300 ವಿಕೆಟ್ ಗಳಿಸಿದ 3ನೇ ಭಾರತೀಯ ಆಲ್ರೌಂಡರ್ ಎನಿಸಲಿದ್ದಾರೆ. ಕಪಿಲ್ ದೇವ್ ಮತ್ತು ಆರ್. ಅಶ್ವಿನ್ ಮೊದಲಿಬ್ಬರು ಸಾಧಕರು.
*3: ರವೀಂದ್ರ ಜಡೇಜಾ 6 ವಿಕೆಟ್ ಗಳಿಸಿದರೆ ಟೆಸ್ಟ್ನಲ್ಲಿ 300 ವಿಕೆಟ್ ಗಳಿಸಿದ 3ನೇ ಎಡಗೈ ಸ್ಪಿನ್ನರ್ ಎನಿಸಲಿದ್ದಾರೆ. ರಂಗನಾ ಹೆರಾತ್ (463) ಮತ್ತು ಡೇನಿಯಲ್ ವೆಟ್ಟೋರಿ (362) ಮೊದಲಿಬ್ಬರು.
*58: ವಿರಾಟ್ ಕೊಹ್ಲಿ ಇನ್ನು 58 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 27 ಸಾವಿರ ರನ್ ಗಳಿಸಿದ 4ನೇ ಬ್ಯಾಟರ್ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ (34,357), ಕುಮಾರ ಸಂಗಕ್ಕರ (28,016) ಮತ್ತು ರಿಕಿ ಪಾಂಟಿಂಗ್ (27,483) ಮೊದಲ ಮೂವರು.
4: ಆರ್. ಅಶ್ವಿನ್ (516) ಇನ್ನು 4 ವಿಕೆಟ್ ಗಳಿಸಿದರೆ ವೆಸ್ಟ್ ಇಂಡೀಸ್ನ ಕರ್ಟ್ನಿ ವಾಲ್ಶ್ರನ್ನು ಹಿಂದಿಕ್ಕಿ (519) ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಬೌಲರ್ಗಳ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಲಿದ್ದಾರೆ. ಸರಣಿಯಲ್ಲಿ 15 ವಿಕೆಟ್ ಗಳಿಸಿದರೆ ಆಸೀಸ್ನ ನಾಥನ್ ಲ್ಯಾನ್ರನ್ನೂ (530) ಹಿಂದಿಕ್ಕಬಹುದಾಗಿದೆ.
*5: ಬಾಂಗ್ಲಾ ವಿರುದ್ಧ ಆಡಿದ ಕೊನೇ 5 ಟೆಸ್ಟ್ ಪಂದ್ಯಗಳಲ್ಲಿ ಗೆದ್ದ ದಾಖಲೆ ಭಾರತ ತಂಡದ್ದಾಗಿದೆ.