ಕ್ರೀಡೆ

ಸೋಲಿನ ನಡುವೆಯೂ ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

ಜೈಪುರ: ಇಲ್ಲಿನ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಆರ್​ಸಿಬಿ ತನ್ನ ಸೋಲಿನ ಸ್ಟ್ರೀಕ್​ಅನ್ನು ಮುಂದುವರೆಸಿದ್ದು, ರಾಜಸ್ಥಾನ ಲೀಗ್​ನಲ್ಲಿ ಸತತ ನಾಲ್ಕನೇ ಜಯವನ್ನು ದಾಖಲಿಸಿದೆ. ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ ವಿರಾಟ್​ ಕೊಹ್ಲಿ ಸೋಲಿನ ನಡುವೆಯೂ ಹೊಸ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸೋಲಿನ ನಡುವೆಯೂ ವಿರಾಟ್​ ಕೊಹ್ಲಿ ಭರ್ಜರಿ ದಾಖಲೆ ಬರೆದಿದ್ದು, ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಐಪಿಎಲ್​ ಇತಿಹಾಸದ ಅತ್ಯಂತ ಯಶಸ್ವಿ ಫೀಲ್ಡರ್ ಎಂಬ ದಾಖಲೆಯನ್ನು ವಿರಾಟ್​ ತಮ್ಮದಾಗಿಸಿಕೊಂಡಿದ್ದಾರೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರಿಯಾನ್ ಪರಾಗ್ ಅವರ ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್​ನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಎಂಬ ದಾಖಲೆ ಕಿಂಗ್ ಕೊಹ್ಲಿ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಸುರೇಶ್ ರೈನಾ ಅವರ ಹೆಸರಿನಲ್ಲಿತ್ತು. 205 ಪಂದ್ಯಗಳಲ್ಲಿ ಫೀಲ್ಡಿಂಗ್ ಮಾಡಿರುವ ರೈನಾ ಒಟ್ಟು 109 ಕ್ಯಾಚ್​ಗಳನ್ನು ಹಿಡಿದು ದಾಖಲೆ ನಿರ್ಮಿಸಿದ್ದರು.

ಇದೀಗ 242 ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿ ಒಟ್ಟು 110 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಸೆಂಚುರಿ ಸಿಡಿಸಿ ಮಿಂಚಿದ್ದರು. ಈ ಮೂಲಕ ಐಪಿಎಲ್​ನಲ್ಲಿ 8 ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಯೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.