ನವದೆಹಲಿ: ಪ್ರಸ್ತುತ ಆಸ್ಟ್ರೇಲಿಯಾದ ಪರ್ತ್ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಟೆಸ್ಟ್ ಮ್ಯಾಚ್ನ ಎರಡನೇ ಇನ್ನಿಂಗ್ಸ್ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ, ಶತಕ ಬಾರಿಸಿ, ತಂಡದ ರನ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರು. ಇದು ಕಾಂಗೂರು ಪಡೆ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. 143 ಎಸೆತಗಳಲ್ಲಿ ಶತಕ ಬಾರಿಸಿದ ವಿರಾಟ್, ಇದೀಗ ಐತಿಹಾಸಿಕ ದಾಖಲೆ (Record) ಬರೆಯಲು ಎದುರುನೋಡುತ್ತಿದ್ದಾರೆ.
ಇದನ್ನೂ ಓದಿ: ದೈಹಿಕ- ಮಾನಸಿಕ ಉತ್ತಮ ಆರೋಗ್ಯಕ್ಕೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ :ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ
ಟೆಸ್ಟ್ ಪಂದ್ಯಗಳಲ್ಲಿ ಇದು ವಿರಾಟ್ ಕೊಹ್ಲಿ ಅವರ 30ನೇ ಶತಕವಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 81 ಸೆಂಚುರಿ ದಾಖಲಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹತ್ತು ಶತಕಗಳನ್ನು ಗಳಿಸಿದ ಮೊದಲ ವಿದೇಶಿ ಬ್ಯಾಟರ್ ಆಗಲು ಕೊಹ್ಲಿಗೆ ಬೇಕಿರುವುದು ಕೇವಲ ಮೂರೇ ಮೂರು ಸೆಂಚುರಿ ಮಾತ್ರ. ಇನ್ನು ಉಳಿದಿರುವ ನಾಲ್ಕು ಟೆಸ್ಟ್ ಮ್ಯಾಚ್ಗಳಲ್ಲಿ ವಿರಾಟ್ ಏನಾದರೂ ಮೂರು ಶತಕ ಗಳಿಸುವಲ್ಲಿ ಸಫಲರಾದರೆ, ಈ ಐತಿಹಾಸಿಕ ದಾಖಲೆ ಬರೆಯುವ ಮೊದಲ ಆಟಗಾರ ಹಾಗೂ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಪ್ರಸ್ತುತ ಇಂಗ್ಲೆಂಡ್ ದಿಗ್ಗಜ ಜ್ಯಾಕ್ ಹಾಬ್ಸ್ ಆಸ್ಟ್ರೇಲಿಯಾ ನೆಲದಲ್ಲಿ 9 ಶತಕಗಳನ್ನು ಬಾರಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅಸಲಿಗೆ ಜ್ಯಾಕ್ ಜತೆಗೆ ಇನ್ಯಾವ ದೇಶದ ಆಟಗಾರರು ಈ ಸಾಲಿನಲ್ಲಿದ್ದಾರೆ ಎಂಬುದರ ವಿವರ ಹೀಗಿದೆ.
ಜ್ಯಾಕ್ ಹಾಬ್ಸ್ (ಇಂಗ್ಲೆಂಡ್)- 9
ವಾಲಿ ಹ್ಯಾಮಂಡ್ (ಇಂಗ್ಲೆಂಡ್)- 7
ವಿರಾಟ್ ಕೊಹ್ಲಿ (ಭಾರತ) - 7
ಸಚಿನ್ ತೆಂಡೂಲ್ಕರ್ (ಭಾರತ)-6
ಹರ್ಬರ್ಟ್ ಸಟ್‌ಕ್ಲಿಫ್ (ಇಂಗ್ಲೆಂಡ್)- 6
ಇನ್ನು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ನಡೆಯುವ ಅಡಿಲೇಡ್ ಓವಲ್ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವೆಸ್ಟ್ ಇಂಡೀಸ್ನ ದಂತಕಥೆ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೇವಲ 102 ರನ್‌ಗಳ ಹಿಂದಿದ್ದಾರೆ. ಅಡಿಲೇಡ್‌ನಲ್ಲಿ ಲಾರಾ 610 ರನ್ ಗಳಿಸಿ, ಮೊದಲ ಆಟಗಾರನ ಸ್ಥಾನದಲ್ಲಿದ್ದಾರೆ. ಈ ದಾಖಲೆ ಮುರಿಯಲು ವಿರಾಟ್ಗೆ ಬೇಕಿರುವುದು ಕೇವಲ 103 ರನ್ಗಳು ಮಾತ್ರ,(ಏಜೆನ್ಸೀಸ್).