ಕ್ರೀಡೆ

ಟಿ20 ವಿಶ್ವಕಪ್​ ಗೆಲುವಿಗೆ ಇವರ ಕೊಡುಗೆ ಅಪಾರ: ವಿರಾಟ್​ ಕೊಹ್ಲಿ ಹೆಸರಿಸಿದ ಆ ಸ್ಟಾರ್​ ಆಟಗಾರ ಯಾರು?

ನವದೆಹಲಿ: ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ಗಳ ಅಂತರದಿಂದ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಟೀಮ್ ಇಂಡಿಯಾ, ನಿನ್ನೆಯಷ್ಟೇ ಭಾರತಕ್ಕೆ ಬಂದಿಳಿಯಿತು. ​ ವಿಶ್ವಕಪ್ ಗೆಲುವು ಸಾಧಿಸಿದ ವೀರರಿಗೆ ಭವ್ಯ ಸ್ವಾಗತ ಕೋರಿದ ಭಾರತೀಯರು, ಅಪಾರ ಸಂಖ್ಯೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಿದ್ದರು. 17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್​ ತಂದ ಆಟಗಾರರಿಗೆ ಗೌರವ ಸಲ್ಲಿಸಿದ ಬಿಸಿಸಿಐ, ಈ ಹಿಂದೆ ಘೋಷಿಸಿದ್ದ 125 ಕೋಟಿ ರೂ. ಬಹುಮಾನ ಮೊತ್ತವನ್ನು ಇಡೀ ತಂಡಕ್ಕೆ ಹಸ್ತಾಂತರಿಸಿತು. ಈ ಮಧ್ಯೆ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಕಂಡ ಅಭಿಮಾನಿಗಳು, ಸ್ಟೇಡಿಯಂ ಸುತ್ತ ಅವರ ಹೆಸರನ್ನು ಕೂಗಿ, ಜೈಕಾರಗಳನ್ನು ಮೊಳಗಿಸಿದರು.

ಮುಂಬೈನ ವಾಂಖೆಡೆ ಸ್ಟೇಡಿಯಂಗೆ ಟೀಂ ಇಂಡಿಯಾ ಆಟಗಾರರು ಬರುತ್ತಿದ್ದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು, ಮರ, ಬಿಲ್ಡಿಂಗ್ ಮೇಲೇರಿ ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಸಂಭ್ರಮಿಸಿದರು. ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ಕೊಟ್ಟ ಪ್ರತಿಯೊಬ್ಬ ಆಟಗಾರರಿಗೂ ವಿಶೇಷ ಗೌರವ ಸಲ್ಲಿಸಿದ ವಿರಾಟ್ ಕೊಹ್ಲಿ ಟಿ20ಐ ಫಾರ್ಮೆಟ್​ಗೆ ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್ ಪ್ರಿಯರಿಗೆ ಅತೀವ ಬೇಸರವನ್ನು ಉಂಟುಮಾಡಿತು. ಈ ವೇಳೆ ಭಾವುಕರಾಗಿ ಮಾತನಾಡಿದ ವಿರಾಟ್​, ಪ್ರತಿ ಪಂದ್ಯದಲ್ಲಿಯೂ ಜಸ್ಪ್ರಿತ್ ಬುಮ್ರಾ ಅವರ ಕೊಡುಗೆ ಅಪಾರವಾಗಿತ್ತು ಎಂದು ಹೇಳಿದರು.

"ವಿಶ್ವಕಪ್ ಟೂರ್ನಿಯಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ ಬುಮ್ರಾ, ಪ್ರತಿ ಪಂದ್ಯದಲ್ಲಿ ನಮ್ಮ ಗೆಲುವನ್ನು ಜೀವಂತವಾಗಿರಿಸಿಕೊಳ್ಳುತ್ತಿದ್ದರು. ಎಂತಹ ಕಷ್ಟಕರ ಸಂದರ್ಭಗಳು ಎದುರಾದರೂ ಸಹ ಜಸ್ಪ್ರೀತ್ ಗೆಲುವನ್ನು ನಮ್ಮ ಕಡೆ ತರುತ್ತಿದ್ದರು. ಈ ಪೀಳಿಗೆಯ ಅದ್ಭುತ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅವರು ನಮ್ಮ ತಂಡಕ್ಕೆ ಆಡುತ್ತಿರುವುದು ನಿಜಕ್ಕೂ ನಮ್ಮ ಅದೃಷ್ಟ. ವಿಶ್ವಕಪ್ ಗೆಲುವಿಗೆ ಮುಖ್ಯ ಕಾರಣರಾದ ಬುಮ್ರಾಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಕೊಹ್ಲಿ ಹೇಳಿದರು,(ಏಜೆನ್ಸೀಸ್).