ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿದ್ದು, ಅವರು ಹಾಕುವ ಪೋಸ್ಟ್ಗಳಿಂದ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಹಣ ಗಳಿಸುತ್ತಿದ್ದಾರೆ ಎಂಬ ಸುದ್ದಿ ಶುಕ್ರವಾರ ಎಲ್ಲೆಡೆ ವೈರಲ್ ಆಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಕುರಿತು ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದು, ಇದು ಶುದ್ದ ಸುಳ್ಳು ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೊಹ್ಲಿ ಈವರೆಗೂ ನಾನು ಜೀವನದಲ್ಲಿ ಸ್ವೀಕರಿಸಿರುವ ಪ್ರತಿಯೊಂದಕ್ಕೂ ಕೃತಜ್ಞ ಮತ್ತು ಋಣಿಯಾಗಿದ್ದೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಹಣ ಗಳಿಸುತ್ತಿದ್ದೇನೆ ಎಂಬ ವಿಚಾರ ಸುಳ್ಳು ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ಹಾಕುವ ಒಂದು ಪೋಸ್ಟ್ಗೆ 9-15 ಕೋಟಿ ರೂಪಾಯಿ ಹಣ ಗಳಿಸುತ್ತಾರೆ ಎಂಬ ಸುದ್ದಿ ಶುಕ್ರವಾರ ಎಲ್ಲೆಡೆ ವೈರಲ್ ಆಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯೊಂದನ್ನೂ ಸಹ ಹುಟ್ಟು ಹಾಕಿತ್ತು.