ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಹೇಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಫೀಲ್ಡಿಂಗ್ ಅಥವಾ ಬ್ಯಾಟಿಂಗ್ ಯಾವುದೇ ಇರಲಿ ಮೈದಾನದಲ್ಲಿದ್ದರೆ ಸಾಕು ಆಕ್ರಮಣಕಾರಿಯಾಗಿರುತ್ತಾರೆ. ಕೊಹ್ಲಿಯ ಈ ನಡೆ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸುತ್ತದೆ. ಮೈದಾನದಿಂದ ಹೊರಗೆ ಮೋಜು ಮಾಡುವ ಕೊಹ್ಲಿ, ಕ್ರೀಡೆ ಅಂತಾ ಬಂದಾಗ ಬದಲಾಗುತ್ತಾರೆ. ತನ್ನನ್ನು ಕೆಣಕಿದರಂತೂ ತಕ್ಕ ಉತ್ತರ ಕೊಡದೇ ಇರುವುದಿಲ್ಲ. ಆದ್ದರಿಂದಲೇ ಎದುರಾಳಿ ತಂಡಗಳಿಗೆ ಕೊಹ್ಲಿ ಅಂದರೆ ಭಯ. ಅನೇಕರು ಕೊಹ್ಲಿಯ ಈ ವರ್ತನೆಯನ್ನು ಮೆಚ್ಚುತ್ತಾರೆ. ಆದರೆ, ಕೆಲವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಕೊಹ್ಲಿ ಬಗ್ಗೆ ಏನೇನೋ ಹೇಳುತ್ತಾರೆ. ಆದರೆ, ಕೊಹ್ಲಿಯ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಆರ್‌ಸಿಬಿ ಸ್ಟಾರ್ ಬೌಲರ್ ಯಶ್ ದಯಾಳ್ ತಿಳಿಸಿದ್ದಾರೆ.
ವಿರಾಟ್ ಎಷ್ಟು ಒಳ್ಳೆಯವರು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಕೊಹ್ಲಿ ವಜ್ರದಂತೆ. ಹಿರಿಯರು ಹಾಗೂ ಕಿರಿಯರು ಎಂಬ ಬೇದ-ಭಾವವಿಲ್ಲದೆ ಸುಲಭವಾಗಿ ಎಲ್ಲರೊಂದಿಗೂ ಬೆರೆಯುತ್ತಾರೆ ಎಂದು ಯಶ್ ದಯಾಳ್ ಹೇಳಿದರು.
ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ನನ್ನ ಯಶಸ್ಸಿನ ಹಿಂದೆ ವಿರಾಟ್ ಭಾಯ್ ಅವರ ಕೊಡುಗೆ ಇದೆ. ಇಡೀ ಸೀಸನ್ನಲ್ಲಿ ನನಗೆ ಒಳ್ಳೆಯ ಭರವಸೆಯನ್ನು ಕೊಹ್ಲಿ ನೀಡಿದರು. ಆರ್‌ಸಿಬಿ ತಂಡ ಹೊಸದಾದ್ದರಿಂದ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ಹೊಸ ಸ್ಥಳಕ್ಕೆ ಬಂದಿದ್ದೇನೆ ಎಂದು ಭಾವಿಸಬೇಡಿ. ಇಡೀ ಸೀಸನ್ ನಾನು ನಿಮಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದರು. ಅದರಂತೆ ಸಂಪೂರ್ಣವಾಗಿ ಬೆಂಬಲ ನೀಡಿದರು. ನನಗೆ ಮಾತ್ರವಲ್ಲ ತಂಡದಲ್ಲಿರುವ ಎಲ್ಲ ಯುವಕರ ಜತೆಯಲ್ಲೂ ಕೊಹ್ಲಿ ಇದೇ ರೀತಿ ನಡೆದುಕೊಳ್ಳುತ್ತಾರೆ. ಕೆಲ ಜನರು ಮಾತನಾಡುವಂತೆ ಕೊಹ್ಲಿ ಇಲ್ಲ. ಅವರು ತುಂಬಾ ಒಳ್ಳೆಯವರು ಎಂದು ಯಶ್ ದಯಾಳ್ ತಿಳಿಸಿದರು.
ಅಂದಹಾಗೆ ಯಶ್ ದಯಾಳ್ ಎಸೆದ ಒಂದೇ ಓವರ್‌ನಲ್ಲಿ ರಿಂಕು ಸತತ 5 ಸಿಕ್ಸರ್‌ಗಳನ್ನು ಬಾರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಓವರ್ ನಂತರ ಯಶ್ ಖಿನ್ನತೆಗೆ ಒಳಗಾಗಿದ್ದರು. ತೂಕ ಇಳಿಸಿಕೊಂಡು ಕ್ರಿಕೆಟ್ನಿಂದ ದೂರ ಉಳಿದಿದ್ದರು. ಕೆಲ ವರ್ಷಗಳ ನಂತರ ರೀ ಎಂಟ್ರಿ ಕೊಟ್ಟ ಯಶ್, ತಮ್ಮ ಬೌಲಿಂಗ್ನಲ್ಲಿ ವೈವಿಧ್ಯತೆ ತಂದರು. ಕಟ್ಟರ್, ಸ್ಲೋ ಬಾಲ್ ಮತ್ತು ಯಾರ್ಕರ್‌ಗಳನ್ನು ಬೌಲ್ ಮಾಡಲು ಕಲಿತರು. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ನಂತರ, ಐಪಿಎಲ್-2024 ಕ್ಕಿಂತ ಮೊದಲು ನಡೆದ ಮಿನಿ ಹರಾಜಿನಲ್ಲಿ ಆರ್‌ಸಿಬಿ ಅವರನ್ನು ಭಾರಿ ಮೊತ್ತ ನೀಡಿ ಪಡೆದುಕೊಂಡಿತು.
ಆರ್‌ಸಿಬಿ ತಂಡಕ್ಕೆ ಬಂದ ಯಶ್ ಅವರನ್ನು ನಾಯಕ ಡುಪ್ಲೆಸಿಸ್ ಮತ್ತು ಹಿರಿಯ ಆಟಗಾರ ಕೊಹ್ಲಿ ಬೆಂಬಲ ನೀಡಿದರು. ನೀವು ಉನ್ನತ್ತ ಮಟ್ಟಕ್ಕೆ ಬೆಳೆಯಬಹುದು ಎಂಬ ನಂಬಿಕೆಯನ್ನು ತುಂಬಿದರು. ಪರಿಣಾಮ ಕಳೆದ ಸೀಸನ್ನಲ್ಲಿ ಯಶ್ ಉತ್ತಮ ಬೌಲಿಂಗ್ ಮಾಡಿದರು. 14 ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಕಬಳಿಸಿದರು. ಆರ್‌ಸಿಬಿ ತಂಡ ಪ್ಲೇಆಫ್ ತಲುಪುವಲ್ಲಿ ಯಶ್ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. (ಏಜೆನ್ಸೀಸ್)