ಬ್ರಿಸ್ಬೇನ್: ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಮೊದಲ ಪಂದ್ಯ ಹೊರತುಪಡಿಸಿದರೆ ಉಳಿದ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದು, ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇನ್ನೂ ಸರಣಿಯ ನಾಲ್ಕನೇ ಪಂದ್ಯ ಡಿಸೆಂಬರ್ 26ರಿಂದ ಮೆಲ್ಬೋರ್ನ್ನಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತದೆ. ಈ ಪಂದ್ಯದಲ್ಲಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫಿನಾಲೆ ಕನಸನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ತಯಾರಿ ನಡೆಸುತ್ತಿರುವ ನಡುವೆಯೇ ಘಟನೆಯೊಂದು ನಡೆದಿದ್ದು, ವಿರಾಟ್ ಕೊಹ್ಲಿ (Virat Kohli) ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ.
ಕುಟುಂಬದ ವಿಚಾರಕ್ಕೆ ಸಂಬಂಧಿಸಿದಂತೆ ಸದಾ ಗೌಪ್ಯತೆ ಕಾಪಾಡಿಕೊಂಡು ಬಂದಿರುವ ವಿರಾಟ್ (Virat Kohli) ಮಾಧ್ಯಮಗಳಿಂದ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಹೀಗಿರುವಾಗಲೇ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಆಸ್ಟ್ರೇಲಿಯಾದ ಮಾಧ್ಯಮ ವರದಿಗಾರ್ತಿಯೊಬ್ಬರು ಕೊಹ್ಲಿ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ತೆರಳುತ್ತಿರುವ ವಿಡಿಯೋವನ್ನು ಚಿತ್ರೀಕರಿಸುತ್ತಿರುವುದನ್ನು ಕಂಡು ಸಿಟ್ಟಾದ ವಿರಾಟ್ ಪತ್ರಕರ್ತೆಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ.
ಇನ್ನೂ ವಿರಾಟ್ (Virat Kohli) ಅವರ ಪತ್ನಿ ಹಾಗೂ ಮಕ್ಕಳ ವಿಡಿಯೋವನ್ನು ಚಿತ್ರೀಕರಿಸಿಲ್ಲ ಎಂಬ ವಿಚಾರ ಅರಿತ ವಿರಾಟ್ ಆ ಬಳಿಕ ಸ್ಪಷ್ಟನೆಯನ್ನು ನೀಡಿದ್ದಾರೆ. ನೋಡಿ ನನಗೆ ನನ್ನ ಮಕ್ಕಳೊಂದಿಗೆ ಕೆಲವು ಸಮಯ ಕಳೆಯಬೇಕಾಗಿದೆ. ಹೀಗಿರುವಾಗ ನೀವು ನನ್ನ ಅನುಮತಿ ಇಲ್ಲದೇ ಫೋಟೋ ಅಥವಾ ವಿಡಿಯೋ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪರಿಸ್ಥಿತಿ ತಣ್ಣಗಾದ ಬಳಿಕ ಅಲ್ಲಿದ್ದ ಕ್ಯಾಮರಾಮ್ಯಾನ್ಗಳು ಹಾಗೂ ರಿಪೋರ್ಟ್ಗಳೊಟ್ಟಿಗೆ ವಿರಾಟ್ (Virat Kohli) ಫೋಟೋವನ್ನು ತೆಗೆಸಿಕೊಂಡಿದ್ದಾರೆ.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.