ಕ್ರೀಡೆ

VIDEO | "ಇದು ಮಾಹಿ ಶಾಟ್…" ಆಕರ್ಷಕ ಹೆಲಿಕಾಪ್ಟರ್ ಶಾಟ್ ಸಿಡಿಸಿ ಮುಗುಳ್ನಕ್ಕ ಕೊಹ್ಲಿ!

ತಿರುವನಂತಪುರಂ: ಗ್ರೀನ್​ಫೀಲ್ಡ್​ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಇದೀಗ ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​ಗಳಾದ ಶುಭಮನ್​ ಗಿಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲಿ ಇದೀಗ ವಿರಾಟ್ ಕೊಹ್ಲಿ ಎರಡನೇ ಶತಕ ದಾಖಲಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರಿಸ್​ಗೆ ಬಂದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಶುಭಮನ್ ಜೊತೆಗೆ ಇನ್ನಿಂಗ್ಸ್​ ಕಟ್ಟಿದರು. ನೋಡ ನೋಡುತ್ತಿದ್ದಂತೆ ವಿರಾಟ್ ಕೊಹ್ಲಿ 85 ಎಸೆತಗಳಲ್ಲಿ ತಮ್ಮ 46ನೇ ಅಂತಾರಾಷ್ಟ್ರೀಯ ಏಕದಿನ ಶತಕ ಪೂರೈಸಿದರು.

ಶತಕ ಪೂರೈಸುತ್ತಿದ್ದಂತೆ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಶ್ರೀಲಂಕಾ ಬೌಲರ್​ಗಳನ್ನ ದಂಢಿಸಿದ ವಿರಾಟ್ ಕೊಹ್ಲಿ, 110 ಎಸೆತಗಳಲ್ಲಿ ಅಜೇಯ 166ರನ್ ಸಿಡಿಸಿದರು. ಈ ಇನ್ನಿಂಗ್ಸ್​​ನಲ್ಲಿ 13 ಬೌಂಡರಿ ಹಾಗೂ 8 ಸಿಕ್ಸ್ ಒಳಗೊಂಡಿತ್ತು.

ವಿರಾಟ್ ಕೊಹ್ಲಿ ಶತಕದ ಇನ್ನಿಂಗ್ಸ್​​ನಲ್ಲಿ ಕೆಲವು ಆಕರ್ಷಕ ಹೊಡೆತಗಳ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು. ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸಿಗ್ನೇಚರ್ ಹೊಡೆತ, ಹೆಲಿಕಾಪ್ಟರ್​ ಶಾಟ್ ಬಾರಿಸುವಲ್ಲಿ ಯಶಸ್ವಿಯಾದರು. ವಿಕೆಟ್​ನಿಂದ ಮುಂದೆ ಬಂದು ವಿರಾಟ್ ಹೆಲಿಕಾಪ್ಟರ್​ ಶಾಟ್ ಸಿಡಿಸಿದರು. 97 ಮೀ. ದೂರು ಸಿಡಿದ ಸಿಕ್ಸರ್​ ನೋಡಿದ ವಿರಾಟ್​ ಫ್ಯಾನ್ಸ್​ ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು.

ತನ್ನ ಬ್ಯಾಟಿಂದ ಹೆಲಿಕಾಪ್ಟರ್​ ಶಾಟ್ ಸಿಡಿಯುತ್ತಿದ್ದಂತೆ ಕ್ರಿಸ್​ನ ಇನ್ನೊಂದು ಬದಿಯಲ್ಲಿದ್ದ ಸೂರ್ಯ ಕುಮಾರ್ ಯಾದವ್ ಬಳಿ ಬಂದ ಕೊಹ್ಲಿ, ಇದು "ಮಾಹಿ ಶಾಟ್" ಎಂದು ಹೇಳಿ ಮುಗುಳ್ನಕ್ಕರು. ಇದೀಗ ವಿರಾಟ್ ಕೊಹ್ಲಿಯ ಬ್ಯಾಟಿಂದ ಬಂದಿರುವ ಹೆಲಿಕಾಪ್ಟರ್​ ಶಾಟ್​​ ವಿಡಿಯೋ ಟ್ವಿಟರ್​​ನಲ್ಲಿ ಸಾಕಷ್ಟು ಟ್ರೆಂಡ್ ಮಾಡುತ್ತಿದೆ.