ಬೆಂಗಳೂರು : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಕ್ರಿಕೆಟ್ ಸಮೂಹವೇ ಐಪಿಎಲ್ನಲ್ಲಿ ಆಡಲು ಕಾತರದಿಂದ ಕಾಯುತ್ತಿದೆ. ಇದೀಗ ಐಪಿಎಲ್ ನಡೆಯುವುದು ಖಾತ್ರಿಯಾಗಿದ್ದು, ಯುಎಇಯಲ್ಲಿ ನಡೆಯಲಿರುವ ಲೀಗ್ನಲ್ಲಿ ಆಡಲು ಕೊಹ್ಲಿ ಉತ್ಸುಕರಾಗಿದ್ದಾರೆ. ಆರ್ಸಿಬಿ ತಂಡದ ನಾಯಕನಾಗಿರುವ ಕೊಹ್ಲಿ, ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಹಿಂದಿನ ಆವೃತ್ತಿಗಳ ಫೋಟೋ ಪ್ರಕಟಿಸಿ ಐಪಿಎಲ್ ಎದುರು ನೋಡುತ್ತಿರುವುದಾಗಿ ಸಂದೇಶ ನೀಡಿದ್ದಾರೆ. ಮೂರು ಬಾರಿ ರನ್ನರ್ಅಪ್ ಆಗಿರುವ ಕೊಹ್ಲಿ ಪಡೆ, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: ಧೋನಿ ಸಿಕ್ಸರ್ ದಾಖಲೆ ಮುರಿದ ಮಾರ್ಗನ್
ಹಿಂದಿನ ಆವೃತ್ತಿಗಳಲ್ಲಿ ನಿರಾಸೆ ಅನುಭವಿಸಿದ ಆರ್ಸಿಬಿ, ಈ ಬಾರಿ ಕಪ್ ಗೆಲ್ಲುವ ತಯಾರಿಯಲ್ಲಿದೆ. ಕ್ರಿಕೆಟ್ ಪಂಡಿತರ ಲೆಕ್ಕಾಚಾರದನ್ವಯ ಕೊಹ್ಲಿ ಪಡೆಗೆ ಯುಎಇ ಸೂಕ್ತವಾಗಿ ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ. 2008ರ ಚೊಚ್ಚಲ ಆವೃತ್ತಿಯಿಂದಲೂ ಕೊಹ್ಲಿ ಆರ್ಸಿಬಿ ತಂಡದ ಭಾಗವಾಗಿದ್ದಾರೆ. 2008ರಲ್ಲಿ 12 ಲಕ್ಷ ರೂಪಾಯಿಗೆ 19 ವಯೋಮಿತಿ ಆಟಗಾರರ ಕೋಟಾದಡಿ ಕೊಹ್ಲಿ ಆರ್ಸಿಬಿ ಸೇರಿದ್ದರು.. 2009, 2011 ಹಾಗೂ 2016ಲ್ಲಿ ಆರ್ಸಿಬಿ ಫೈನಲ್ ನಲ್ಲಿ ಮುಗ್ಗರಿಸಿದೆ. ಕೊಹ್ಲಿ ಇದುವರೆಗೂ ಆರ್ಸಿಬಿ ಪರ 177 ಪಂದ್ಯಗಳಿಂದ 5 ಶತಕ, 36 ಅರ್ಧಶತಕ ಸೇರಿದಂತೆ 5412 ರನ್ ಪೇರಿಸಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಿಗದಿಯಾಗಿದೆ. ಮಾರ್ಚ್ 29 ರಂದು ನಿಗದಿಯಾಗಿದ್ದರೂ ಕರೊನಾ ವೈರಸ್ ಭೀತಿಯಿಂದ ಮುಂದೂಡಲಾಗಿತ್ತು.