ಕ್ರೀಡೆ

ದೇಶೀಯ ಟೂರ್ನಿಯಲ್ಲೂ ಮುಂದುವರೆದ ವೈಫಲ್ಯ; Virat Kohli ನೋಡಲು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ

ನವದೆಹಲಿ: ಫಾರ್ಮ್​ಗೆ ಮರಳಲು 13 ವರ್ಷದ ಬಳಿಕ ರಣಜಿ ಟ್ರೋಫಿ ಆಡುತ್ತಿರುವ ವಿರಾಟ್​ ಕೊಹ್ಲಿ (Virat Kohli) ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿದ್ದಾರೆ. ದೆಹಲಿ ಪರ ಕಣಕ್ಕಿಳಿದಿದ್ದ ವಿರಾಟ್​ ಕೊಹ್ಲಿ 6 ರನ್​ಗಳಿಸಿ ಔಟಾಗಿದ್ದು, ದೇಶೀಯ ಟೂರ್ನಿಯಲ್ಲೂ ವಿರಾಟ್ ವೈಫಲ್ಯವನ್ನು ಅನುಭವಿಸಿದ್ದಾರೆ.

ದೆಹಲಿ ಪರ ಬ್ಯಾಟಿಂಗ್ ಮಾಡಲು ಬಂದ ವಿರಾಟ್​ 13 ಎಸೆತಗಳಲ್ಲಿ 1 ಬೌಂಡರಿ ಸಹಿತ 6 ರನ್​ಗಳಿಸಿದ್ದು, ಬೌಂಡರಿ ಸಿಡಿಸಿದ ಮರು ಎಸೆತದಲ್ಲೇ ವಿರಾಟ್​ ಕೊಹ್ಲಿ (Virat Kohli) ವೇಗಿ ಹಿಮಾಂಶು ಸಂಗ್ವಾನ್​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್​ನತ್ತ ಮುಖ ಮಾಡಿದ್ದಾರೆ. ವಿರಾಟ್​ ಕ್ಲೀನ್​ ಬೌಲ್ಡ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

13 ವರ್ಷಗಳ ಬಳಿಕ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಭಾಗಿಯಾದ ವಿರಾಟ್​ರನ್ನು (Virat Kohli) ನೋಡಲು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ವಿರಾಟ್ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಇಳಿಯುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತು. ಆದರೆ ಬೌಂಡರಿ ಸಿಡಿಸಿದ ಮರು ಎಸೆತದಲ್ಲೇ ಸ್ಟೈಟ್​ ಡ್ರೈವ್​ ಮಾಡಲು ಹೋಗಿ ಕ್ಲೀನ್​ಬೌಲ್ಡ್​ ಆಗಿದ್ದಾರೆ. ವಿರಾಟ್​ ಔಟಾಗುತ್ತಿದ್ದಂತೆ ಅಭಿಮಾನಿಗಳು ಬೇಸರದಿಂದ ಮೈದಾನ ತೊರೆಯಲು ಶುರು ಮಾಡಿದರು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡ ಕೇವಲ 241 ರನ್​ಗಳಿಗೆ ಆಲ್​ಔಟ್ ಆಯಿತು.  ಮೊದಲ ದಿನ ಕೊಹ್ಲಿ ಮೈದಾನಕ್ಕೆ ಇಳಿಯಲಿಲ್ಲ. ಹೀಗಾಗಿ, ಅಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ನಿರಾಸೆ ಆಯಿತು. ಎರಡನೇ ದಿನ ಕೊಹ್ಲಿ ಅವರು ಡೆಲ್ಲಿ ಪರ ಬ್ಯಾಟ್ ಬೀಸಿದರು. ಆದರೆ, ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದರು.