ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದಾಖಲೆಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಈ ದಾಖಲೆ ಕ್ರಿಕೆಟ್ಗೆ ಸಂಬಂಧಿಸಿದ್ದಲ್ಲ. ಬದಲಾಗಿ ಸಾಮಾಜಿಕ ಜಾಲತಾಣ ಕುರಿತಾಗಿದೆ.
ಏನಪ್ಪಾ ಆ ದಾಖಲೆ ಎನ್ನುವುದಾದರೆ ಇನ್ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿದ ಮೊದಲ ಭಾರತೀಯನೆಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಸೋಮವಾರ ಕೊಹ್ಲಿ ಅವರ ಫಾಲೋವರ್ಸ್ ಸಂಖ್ಯೆ 100 ಮಿಲಿಯನ್ ದಾಟಿದೆ.
ಮೊದಲ ಭಾರತೀಯ ಮಾತ್ರವಲ್ಲದೆ, ಈ ಸಾಧನೆ ಮಾಡಿದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟರ್ ಸಹ ಹೌದು. ಕೊಹ್ಲಿಯ ಸಾಧನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಭಿನಂದಿಸಿದ್ದು, ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಶ್ಚಿಯಾನೋ ರೊನಾಲ್ಡೋ (266 ಮಿಲಿಯನ್), ಲಿಯೋನೆಲ್ ಮೆಸ್ಸಿ (187 ಮಿಲಿಯನ್) ಮತ್ತು ನೆಯ್ಮಾರ್ (147 ಮಿಲಿಯನ್) ಸೇರಿದಂತೆ ಇತರೆ ಸೆಲೆಬ್ರಿಟಿಗಳ ಸಾಲಿಗೆ ಕೊಹ್ಲಿ ಅವರನ್ನು ಸ್ವಾಗತಿಸಿದೆ.
ಕೊಹ್ಲಿಯನ್ನು ನಂತರ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ 60 ಮಿಲಿಯನ್ ಫಾಲೋವರ್ಸ್ನೊಂದಿಗೆ ಸ್ಥಾನ ಪಡೆದಿದ್ದಾರೆ.
ಇನ್ಸ್ಟಾಗ್ರಾಂ ಹೊರತುಪಡಿಸಿ ಕೊಹ್ಲಿ ಅವರು ಇತರೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಟ್ವಿಟರ್ನಲ್ಲಿ 40.8 ಮಿಲಿಯನ್ ಮತ್ತು ಫೇಸ್ಬುಕ್ನಲ್ಲಿ 36 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದರೆ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಮಾರ್ಚ್ ನಾಲ್ಕರಿಂದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಟೆಸ್ಟ್ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯವನ್ನು ಭಾರತ ಗೆಲ್ಲಬೇಕಿದೆ ಅಥವಾ ಡ್ರಾ ಮಾಡಿಕೊಳ್ಳಬೇಕಿದೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ