Virat Kohli : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಅಫ್ಘಾನಿಸ್ತಾನದ ಮತ್ತು ತಾಲಿಬಾನ್ ಚಳವಳಿಯ ನಾಯಕ ಅನಾಸ್ ಹಕ್ಕಾನಿ ಅವರು ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಶಿಕ್ಷಣ ಮತ್ತು ಕ್ರೀಡೆಯ ಬಗ್ಗೆ ವಿರೋಧ ಮನಸ್ಥಿತಿ ಹೊಂದಿರುವ ತಾಲಿಬಾನ್ನಲ್ಲಿಯೂ ವಿರಾಟ್ ಕೊಹ್ಲಿಗೆ ಅಭಿಮಾನಿಗಳಿವೆ ಎಂಬುದನ್ನು ಈ ಒಂದು ಮನವಿ ಸಾಬೀತುಪಡಿಸುತ್ತದೆ.
ಅನಾಸ್ ಹಕ್ಕಾನಿ ಅವರು ಕ್ರಿಕೆಟ್ ಮತ್ತು ಕೊಹ್ಲಿಯ ಅಭಿಮಾನಿಯೂ ಹೌದು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಹಠಾತ್ ಟೆಸ್ಟ್ ನಿವೃತ್ತಿಯ ಬಗ್ಗೆ ಹಕ್ಕಾನಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಈ ಇಬ್ಬರು ದಿಗ್ಗಜ ಆಟಗಾರರು 2025ರ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವುದು ಗೊತ್ತೇ ಇದೆ. ಇದಕ್ಕೂ ಮೊದಲು ಅಂದರೆ, 2024ರ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಟಿ20 ಮಾದರಿಗೆ ಒಟ್ಟಿಗೆ ವಿದಾಯ ಹೇಳಿದರು.
ಕೊಹ್ಲಿಯ ಟೆಸ್ಟ್ ನಿವೃತ್ತಿ ಘೋಷಣೆಯಿಂದ ನಮಗೆ ಆಶ್ಚರ್ಯವಾಗಿದೆ ಮತ್ತು ಕೊಹ್ಲಿ 50 ವರ್ಷ ತುಂಬುವವರೆಗೆ ಆಡಬೇಕೆಂದು ನಾನು ಬಯಸುತ್ತೇನೆ ಎಂದು ಹಕ್ಕಾನಿ ಹೇಳಿದ್ದಾರೆ. ರೋಹಿತ್ ಅವರು ಟೆಸ್ಟ್ನಿಂದ ನಿವೃತ್ತಿ ಹೊಂದಿರುವುದು ಸಮರ್ಥನೀಯ. ಆದರೆ, ಕೊಹ್ಲಿ ನಿವೃತ್ತಿಯ ಹಿಂದಿನ ಕಾರಣ ನನಗೆ ತಿಳಿದಿಲ್ಲ. ಜಗತ್ತಿನಲ್ಲಿ ಅಷ್ಟು ವಿಶೇಷ ವ್ಯಕ್ತಿಗಳು ಬಹಳ ಕಡಿಮೆ. ಅವರು 50 ವರ್ಷ ತುಂಬುವವರೆಗೆ ಆಡಲು ಪ್ರಯತ್ನಿಸಬೇಕು ಎಂಬುದು ನನ್ನ ಆಸೆ ಎಂದು ಹಕ್ಕಾನಿ ಅವರು ಶುಭಂಕರ್ ಮಿಶ್ರಾ ಅವರೊಂದಿಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಕೊಹ್ಲಿ ಭಾರತೀಯ ಮಾಧ್ಯಮಗಳಿಂದ ನಿರಾಶೆಗೊಂಡಿರಬಹುದು ಆದರೆ, ಅವರಿಗೆ ಇನ್ನೂ ಆಡಲು ಸಮಯವಿದೆ ಮತ್ತು ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ರನ್‌ಗಳನ್ನು ಜೋ ರೂಟ್ ಬೆನ್ನಟ್ಟುವುದನ್ನು ನೀವು ನೋಡಬಹುದು ಎಂದು ಹಕ್ಕಾನಿ ಹೇಳಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿ ಮುಂದುವರಿಯುವುದನ್ನು ತಾಲಿಬಾನ್ ನಾಯಕ ಬಯಸಿದ್ದಾರೆ.
ಅಂದಹಾಗೆ, 36 ವರ್ಷದ ಕೊಹ್ಲಿ 2025, ಮೇ 12ರಂದು ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ಕೇವಲ 770 ರನ್‌ಗಳಿಂದ 10,000 ಟೆಸ್ಟ್ ರನ್‌ಗಳ ಮೈಲಿಗಲ್ಲನ್ನು ತಪ್ಪಿಸಿಕೊಂಡರು. ಕೊಹ್ಲಿಗಿಂತ 5 ದಿನಗಳ ಮೊದಲು ಅಂದರೆ, 2025, ಮೇ 7 ರಂದು ರೋಹಿತ್ ಶರ್ಮ ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿದರು. ಅವರ ನಿವೃತ್ತಿಯ ನಂತರ, ಏಪ್ರಿಲ್ 25 ರಂದು ಶುಭಮಾನ್ ಗಿಲ್ ಅವರಿಗೆ ಟೆಸ್ಟ್ ನಾಯಕತ್ವವನ್ನು ಹಸ್ತಾಂತರಿಸಲಾಯಿತು.
ಪ್ರಸ್ತುತ, ಕೊಹ್ಲಿ ಮತ್ತು ರೋಹಿತ್ ಶರ್ಮ ಏಕದಿನ ಕ್ರಿಕೆಟ್ ಮಾತ್ರ ಆಡಲಿದ್ದಾರೆ. ಅಕ್ಟೋಬರ್‌ನಲ್ಲಿ ಭಾರತ ಮೂರು ಏಕದಿನ ಪಂದ್ಯಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದೆ. ಆ ಸಮಯದಲ್ಲಿ, ಈ ಇಬ್ಬರು ದಂತಕಥೆಯ ಆಟಗಾರರು ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. (ಏಜೆನ್ಸೀಸ್)