ಕ್ರೀಡೆ

ಈ ವಿಷಯದಲ್ಲಿ RCBಗೆ ಇದೊಂದೇ ಆಯ್ಕೆ ಉಳಿದಿರೋದು! ವದಂತಿಗಳಿಗೆ ಕಿವಿಗೊಡದ ಮಿ.360 ಖಡಕ್ ನುಡಿ | AB de Villiers

AB de Villiers: ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ಉತ್ತಮ ಖರೀದಿಯನ್ನೇ ಮಾಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ, ಈ ವರ್ಷವಾದರೂ ಟ್ರೋಫಿ ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿದೆ. ಸ್ಟಾರ್ ಹಾಗೂ ಯುವ ಆಟಗಾರರನ್ನೇ ತನ್ನ ತೆಕ್ಕೆಗೆ ಕರೆದುಕೊಂಡಿರುವ ಆರ್​ಸಿಬಿ, ಹೊಸ ಬಲಿಷ್ಠ ತಂಡದೊಂದಿಗೆ ಮಾರ್ಚ್​ 21ರಿಂದ ಆರಂಭವಾಗಲಿರುವ ಐಪಿಎಲ್​ ಅಖಾಡಕ್ಕಿಳಿಯಲು ಸಜ್ಜಾಗುತ್ತಿದೆ. ಈ ಮಧ್ಯೆ ಫ್ರಾಂಚೈಸಿಗೆ ಕಾಡುತ್ತಿರುವ ಒಂದೇ ಒಂದು ಗೊಂದಲ ಎಂದರೆ ಅದು ಕ್ಯಾಪ್ಟನ್ ಜವಾಬ್ದಾರಿ. ಈ ಸ್ಥಾನವನ್ನು ಯಾರಿಗೆ ಹಸ್ತಾಂತರಿಸಬೇಕು? ಯಾರಿಗೆ ಕೊಟ್ಟರೆ ಸೂಕ್ತ ಎಂಬ ಗೊಂದಲ್ಲದಲ್ಲಿಯೇ ಮ್ಯಾನೇಜ್​ಮೆಂಟ್​ ಇರುವುದು ಸದ್ಯ ಫ್ರಾಂಚೈಸಿಯ ಅಭಿಮಾನಿಗಳ ಕಣ್ಣಿಗೆ ಕಾಣಿಸಿದೆ.

ಮಿ.360 ಎಬಿ ಡಿವಿಲಿಯರ್ಸ್

ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನವೇ ಫಾಪ್​ರನ್ನು ರಿಟೇನ್ ಮಾಡಿಕೊಳ್ಳದ ಆರ್​ಸಿಬಿ, ಅವರನ್ನು ಖರೀದಿಸಲು ಹಿಂದೇಟು ಹಾಕಿತು. ಅಂದಿನಿಂದ ಇಂದಿನವರೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿಯೇ ನಾಯಕರಾಗಿ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ ಎಂದೇ ಫ್ಯಾನ್ಸ್​ ಅಭಿಪ್ರಾಯಿಸಿದ್ದಾರೆ. ಆದರೆ, ಈ ಬಗ್ಗೆ ಮಾತ್ರ ಆರ್​ಸಿಬಿ ಮ್ಯಾನೇಜ್​ಮೆಂಟ್​ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಇದು ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಗೊಂದಲಗಳನ್ನು ಹುಟ್ಟುಹಾಕಿದೆ. ಆದ್ರೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಆರ್​ಸಿಬಿ ತಂಡದ ಮಿ.360 ಎಬಿ ಡಿವಿಲಿಯರ್ಸ್​ ಸ್ಪಷ್ಟವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿಗೆ ಉಳಿದಿರುವುದು ಒಂದೇ ಆಯ್ಕೆ

ಇಲ್ಲಿಯವರೆಗೆ ವಿರಾಟ್​ ಕೊಹ್ಲಿ ಆರ್​ಸಿಬಿಯ ನೂತನ ಕ್ಯಾಪ್ಟನ್ ಎಂಬ ವಿಷಯಕ್ಕೆ ಫ್ರಾಂಚೈಸಿ ಯಾವುದೇ ರೀತಿ ಪ್ರತಿಕ್ರಿಯಿಸದ ಹಿನ್ನೆಲೆ ಅಭಿಮಾನಿಗಳು ವಿರಾಟ್​ರನ್ನು ಕ್ಯಾಪ್ಟನ್​ ಮಾಡುವುದು ಬಹುತೇಕ ಅನುಮಾನ, ತಂಡದ ಯುವ ಆಟಗಾರರಿಗೆ ನಾಯಕನ ಜವಾಬ್ದಾರಿ ಕೊಟ್ಟು, ವಿರಾಟ್​ ತಮ್ಮ ಬ್ಯಾಟಿಂಗ್​ ಮೇಲೆ ಗಮನಹರಿಸಲು ಫ್ರಾಂಚೈಸಿ ನಿರ್ದೇಶನ ನೀಡಬಹುದು. ಇದೇ ಕಾರಣಕ್ಕೆ ಅವರ ಹೆಸರನ್ನು ಎಲ್ಲೂ ಹೇಳದೆ ಸುಮ್ಮನಿದೆ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಬಿಡಿ, ಕ್ಯಾಪ್ಟನ್ ವಿಷಯದಲ್ಲಿ ಆರ್​ಸಿಬಿಗೆ ಉಳಿದಿರುವುದು ಒಂದೇ ಆಯ್ಕೆ ಅದು ವಿರಾಟ್ ಕೊಹ್ಲಿ ಎಂದಿದ್ದಾರೆ.

"ಕಳೆದ ವರ್ಷಗಳಲ್ಲಿ ಅವರ ಅದ್ಭುತ ಇನ್ನಿಂಗ್ಸ್​ಗಳನ್ನು ನಾವೆಲ್ಲಾ ನೋಡಿದ್ದೇವೆ. ವಿರಾಟ್​ ಆಟ ನಿಜಕ್ಕೂ ಸ್ಪೂರ್ತಿದಾಯಕ. ತಮ್ಮ ವೃತ್ತಿಯ ಕೊನೆಗೆ ಸನ್ನಿಹಿತದಲ್ಲಿದ್ದಾರೆ. ಆದರೂ ಸಹ ಅವರ ಆಟದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಾಯಕನ ಜವಾಬ್ದಾರಿ ಯಾರಿಗೆ ಕೊಡಬೇಕು ಎಂಬ ವಿಷಯದಲ್ಲಿ ಫ್ರಾಂಚೈಸಿಗೆ ಬೇರೆ ಯಾವುದೇ ಆಯ್ಕೆಗಳಿಲ್ಲ. ಅವರ ಮುಂದಿರುವುದು ವಿರಾಟ್​ ಕೊಹ್ಲಿ ಮಾತ್ರ" ಎಂದು ಹೇಳಿದ್ದಾರೆ.

2013ರಿಂದ 2021

ಕೊಹ್ಲಿ ಈ ಮುನ್ನ 2013ರಿಂದ 2021ರವರೆಗೆ ಆರ್​ಸಿಬಿ ತಂಡದ ನಾಯಕರಾಗಿದ್ದರು. ಆದರೆ ಬ್ಯಾಟಿಂಗ್​ನತ್ತ ಹೆಚ್ಚಿನ ಗಮನಹರಿಸುವ ಸಲುವಾಗಿ 2022ರ ಆವೃತ್ತಿ ಮೊದಲೇ ನಾಯಕತ್ವ ತ್ಯಜಿಸಿದರು. ಕಳೆದ ಟಿ20 ವಿಶ್ವಕಪ್​ ಬಳಿಕ ಅವರು ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವುದರಿಂದ ಸದ್ಯ ಹೆಚ್ಚಿನ ಹೊರೆ ಹೊಂದಿಲ್ಲ. ಹೀಗಾಗಿ ತನ್ನ ಪ್ರಮುಖ ಕೊರತೆಯಾಗಿರುವ ಐಪಿಎಲ್​ ಟ್ರೋಫಿಯನ್ನು ಈ ಬಾರಿ ನನಸಾಗಿಸಿಕೊಳ್ಳಲು ಅವರು ಮತ್ತೆ ನಾಯಕತ್ವವನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇದೆ ಎಂಬ ಮಾತುಗಳು ಕೇಳಿಬಂದಿವೆ,(ಏಜೆನ್ಸೀಸ್).