ಕ್ರೀಡೆ

ಇದು ಭಾರತ ವಿರುದ್ಧದ ಕುತಂತ್ರ! ವಿನೇಶ್​ ಪೋಗಟ್​ ಅನರ್ಹದ ಬಗ್ಗೆ ವಿಜೇಂದರ್​ ಸಿಂಗ್​ ಆಕ್ರೋಶ

ನವದೆಹಲಿ: ಪ್ಯಾರಿಸ್​​ ಒಲಿಂಪಿಕ್ಸ್​ನಿಂದ ಕುಸ್ತಿಪಟು ವಿನೇಶ್​ ಪೋಗಟ್ ಅವರನ್ನು ಅನರ್ಹಗೊಳಿಸಿದ್ದಕ್ಕೆ 2008ರ ಬೀಜಿಂಗ್​ ಒಲಿಂಪಿಕ್ಸ್​ ಪದಕ ವಿಜೇತ ಬಾಕ್ಸರ್​ ವಿಜೇಂದರ್​ ಸಿಂಗ್​​ ಆಕ್ರೋಶ ಹೊರಹಾಕಿದ್ದಾರೆ.

ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಅವರು ಫೈನಲ್​ ಪ್ರವೇಶ ಪಡೆದಿದ್ದರು. ಆದರೆ, ಫೈನಲ್​ಗೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ 150 ಗ್ರಾಂ ಹೆಚ್ಚಿದ್ದರಿಂದ ವಿನೇಶ್​ ಅವರನ್ನು ಅನರ್ಹಗೊಳಿಸಲಾಗಿದೆ. ಒಂದು ವೇಳೆ ಅರ್ಹತೆ ಪಡೆದಿದ್ದರೆ ಇಂದು ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಆಡಬೇಕಿತ್ತು. ಆದರೆ, ಅನರ್ಹಗೊಂಡಿದ್ದರಿಂದ ಪದಕದ ಆಸೆ ನುಚ್ಚು ನೂರಾಗಿದೆ.

ವಿನೇಶ್​ ಅನರ್ಹಗೊಂಡಿದ್ದಕ್ಕೆ ಒಲಿಂಪಿಕ್ಸ್​ ಆಯೋಜಕರ ವಿರುದ್ಧ ಬಾಕ್ಸರ್​ ವಿಜೇಂದರ್​ ಕಿಡಿಕಾರಿದ್ದಾರೆ. ವಿನೇಶ್​ ಅವರು ಕುತಂತ್ರದ ಬಲಿಪಶು ಎಂದಿದ್ದಾರೆ. ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳಲು ವಿನೇಶ್​ಗೆ ಅವಕಾಶವನ್ನು ನೀಡಬಹುದಿತ್ತು ಎಂದಿದ್ದಾರೆ.

ಭಾರತ ಮತ್ತು ಭಾರತೀಯ ಕುಸ್ತಿಪಟುಗಳ ವಿರುದ್ಧ ನಡೆದಿರುವ ಬೃಹತ್​ ಷಡ್ಯಂತ್ರವಿದು. ವಿನೇಶ್​ ಆಡಿದ ಪರಿ ಪ್ರಶಂಸೆಗೆ ಅರ್ಹವಾಗಿದೆ. ಆದರೆ, ಆ ಖುಷಿಯನ್ನು ಕೆಲವು ಮಂದಿ ಅರಗಿಸಿಕೊಳ್ಳಲು ಆಗಲಿಲ್ಲ. ಒಂದೇ ರಾತ್ರಿಯಲ್ಲಿ ನಾವು 5 ರಿಂದ 6 ಕೆಜಿ ತೂಕವನ್ನು ಇಳಿಸುತ್ತೇವೆ. ಹೀಗಿರುವಾಗ ಕೇವಲ 100 ಗ್ರಾಂ ಸಮಸ್ಯೆಯೇ ಅಲ್ಲ. ಬಹುಶಃ ಯಾರಿಗೋ ಸಮಸ್ಯೆ ಇರುವಂತೆ ನಾನು ಭಾವಿಸುತ್ತೇನೆ. ಹೀಗಾಗಿಯೇ ಅನರ್ಹಗೊಳಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚುವರಿ 100 ಗ್ರಾಂ ತೂಕ ಕಳೆದುಕೊಳ್ಳಲು ಆಕೆಗೆ ಅವಕಾಶ ನೀಡಬಹುದಿತ್ತು ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ವಿಜೇಂದರ್​ ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ನಾನು ಈ ರೀತಿಯದ್ದನ್ನು ಹಿಂದೆಂದೂ ನೋಡಿಲ್ಲ ಎಂದು ವಿಜೇಂದರ್ ಇದೇ ಸಂದರ್ಭದಲ್ಲಿ ಹೇಳಿದರು. ಅಂದಹಾಗೆ ವಿಜೇಂದರ್​ ಅವರು ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್‌ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಫೈನಲ್​ನಲ್ಲಿ ವಿನೇಶ್​ ಸೆಣಸಾಡಬೇಕಿತ್ತು. ಆದರೆ, ಅನರ್ಹಗೊಂಡಿರುವುದು ಭಾರತೀಯರಿಗೆ ಆಘಾತ ಉಂಟುಮಾಡಿದೆ. ಹರಿಯಾಣದ 29 ವರ್ಷದ ವಿನೇಶ್ ಪೋಗಟ್ ಮಂಗಳವಾರ (ಆ.6) ರಾತ್ರಿ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಈ ಮುನ್ನ 2016ರ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದ ವಿನೇಶ್, ಕ್ವಾರ್ಟರ್​ಫೈನಲ್​ನಲ್ಲಿ ಗಾಯಕ್ಕೆ ತುತ್ತಾಗಿ ಪಂದ್ಯವನ್ನು ಅರ್ಧಕ್ಕೆ ತ್ಯಜಿಸಿದ್ದರು. 2021ರ ಟೋಕಿಯೊ ಗೇಮ್ಸ್​ನಲ್ಲಿ 53 ಕೆಜಿ ವಿಭಾಗದಲ್ಲಿ ಆಡಿದಾಗಲೂ ಎಂಟರ ಘಟ್ಟದಲ್ಲಿ ವಿನೇಶ್ ಪದಕದ ಕಸನು ಭಗ್ನಗೊಂಡಿತು. (ಏಜೆನ್ಸೀಸ್​)