ಕ್ರೀಡೆ

25 ಸಾವಿರ ಇದ್ದ ಫಾಲೋವರ್ಸ್​ ಎರಡೇ ದಿನದಲ್ಲಿ ಇಷ್ಟೊಂದಾ!? ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ವಿಘ್ನೇಶ್! Vignesh Puthur

Vignesh Puthur : ಕೇರಳ ಮೂಲದ ಯುವ ಸ್ಪಿನ್ನರ್ ವಿಘ್ನೇಶ್​ ಪುಥುರ್​ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಮೈದಾನಕ್ಕಿಳಿದ ವಿಘ್ನೇಶ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಿಂಚಿದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 32 ರನ್‌ಗಳನ್ನು ನೀಡಿ, ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ನಾಯಕ ರುತುರಾಜ್​ ಗಾಯಕ್ವಾಡ್ ಹಾಗೂ ಹಿಟ್ಟರ್‌ಗಳಾದ ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರನ್ನು ಔಟ್ ಮಾಡಿ ಛಾಪು ಮೂಡಿಸಿದರು. ಈ 24ರ ಹರೆಯದ ಲೆಗ್ ಸ್ಪಿನ್ನರ್ ಎಂಎಸ್ ಧೋನಿಯವರನ್ನೂ ಮೆಚ್ಚಿಸಿದರು. ವಿಘ್ನೇಶ್ ಅವರ ಅದ್ಭುತ ಬೌಲಿಂಗ್​ಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಇತ್ತೀಚಿನವರೆಗೂ ವಿಘ್ನೇಶ್​ ಪುಥುರ್​ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಒಂದೇ ಐಪಿಎಲ್ ಪಂದ್ಯದ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ. ಅವರು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ವಿಘ್ನೇಶ್ ಯಾರು ಎಂದು ಗೂಗಲ್​ನಲ್ಲಿ ಎಲ್ಲರೂ ಹುಡುಕಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವರನ್ನು ಹಿಂಬಾಲಿಸುತ್ತಿದ್ದಾರೆ. ಪ್ರಸ್ತುತ, ವಿಘ್ನೇಶ್​ ಪುಥುರ್​ ಅವರು 4.4 ಫಾಲೋವರ್ಸ್​ ಹೊಂದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕೇವಲ 25 ಸಾವಿರ ಫಾಲೋವರ್ಸ್ ಹೊಂದಿದ್ದರು. ಆದರೆ, ಈಗ ಬರೋಬ್ಬರಿ 4.4 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಸದ್ಯ ವಿಘ್ನೇಶ್ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.

ಅಂದಹಾಗೆ ರಾಜ್ಯ ಕ್ರಿಕೆಟ್​ ತಂಡದ ಪರ ಒಂದೂ ಪಂದ್ಯ ಆಡುವ ಅವಕಾಶ ಪಡೆಯದ ನಡುವೆಯೂ ಐಪಿಎಲ್​ನಲ್ಲಿ ಅವಕಾಶ ಪಡೆದ ಪುಥುರ್​, ಮುಂಬೈ ಇಂಡಿಯನ್ಸ್​ ಪರ ಮೊದಲ ಪಂದ್ಯದಲ್ಲೇ 3 ವಿಕೆಟ್​ ಕಬಳಿಸುವ ಮೂಲಕ ವಿಖ್ಯಾತಿ ಗಳಿಸಿದ್ದಾರೆ. 156 ರನ್​ ಗುರಿಯನ್ನು ಸುಲಭವಾಗಿ ತಲುಪುವ ನಿರೀಕ್ಷೆಯಲ್ಲಿದ್ದ ಸಿಎಸ್​ಕೆ ಹಾದಿಗೆ ವಿಘ್ನ ತರುವ ಭೀತಿಯನ್ನು ವಿಘ್ನೇಶ್​ ಹುಟ್ಟಿಸಿದ್ದರು. ಅಲ್ಲದೆ ಪಂದ್ಯದ ಬಳಿಕ ದಿಗ್ಗಜ ಎಂಎಸ್​ ಧೋನಿ ಪ್ರಶಂಸಿಸಿದ ಚಿತ್ರ-ವಿಡಿಯೋ ವೈರಲ್​ ಆಗುವುದರೊಂದಿಗೆ ವಿಘ್ನೇಶ್​ ಕ್ರಿಕೆಟ್​ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.

ಕೇರಳದ ಮಲಪ್ಪುರಂನ ಆಟೋ ಚಾಲಕ ಸುನೀಲ್​ ಕುಮಾರ್​ ಮತ್ತು ಗೃಹಿಣಿ ಬಿಂದು ದಂಪತಿಯ ಪುತ್ರನಾಗಿರುವ ವಿಘ್ನೇಶ್​, ಕ್ಯಾಲಿಕಟ್​ ವಿಶ್ವವಿದ್ಯಾಲಯದ ಎಂಎ (ಇಂಗ್ಲಿಷ್​ ಸಾಹಿತ್ಯ) ವಿದ್ಯಾರ್ಥಿಯಾಗಿದ್ದಾರೆ. ಪ್ರಥಮ ದರ್ಜೆ ಪಂದ್ಯವನ್ನು ಆಡಿರದ ವಿಘ್ನೇಶ್​, ಕೇರಳ ಕ್ರಿಕೆಟ್​ ಲೀಗ್​ ಮತ್ತು ತಮಿಳುನಾಡು ಪ್ರೀಮಿಯರ್​ ಲೀಗ್​ನಂಥ ರಾಜ್ಯಮಟ್ಟದ ಟಿ20 ಟೂರ್ನಿಗಳಲ್ಲಿ ಆಡಿದ ಅನುಭವವನ್ನಷ್ಟೇ ಹೊಂದಿದ್ದರು.

ಕಳೆದ ಮೆಗಾ ಹರಾಜಿನಲ್ಲಿ ಮುಂಬೈ ತಂಡ ಮೂಲಬೆಲೆ 30 ಲಕ್ಷ ರೂ.ಗೆ ವಿಘ್ನೇಶ್​ರನ್ನು ಖರೀದಿಸಿದ ಬಳಿಕ ದಕ್ಷಿಣ ಆಫ್ರಿಕಾದ ಎಸ್​ಎ20 ಲೀಗ್​ ವೇಳೆ ಎಂಐ ಕೇಪ್​ಟೌನ್​ ನಾಯಕ ಹಾಗೂ ಸ್ಪಿನ್​ ಮಾಂತ್ರಿಕ ರಶೀದ್​ ಖಾನ್​ ಜತೆ ನೆಟ್ಸ್​ನಲ್ಲಿ ಬೌಲಿಂಗ್​ ಮಾಡುವ ಮತ್ತು ಟಿಪ್ಸ್​ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ನೆಟ್ಸ್​ನಲ್ಲಿ ರೋಹಿತ್​, ಸೂರ್ಯಕುಮಾರ್​, ತಿಲಕ್​ ವರ್ಮರಂಥ ಬ್ಯಾಟರ್​ಗಳು ವಿಘ್ನೇಶ್​ ಎಸೆತಗಳನ್ನು ಎದುರಿಸಲು ಕಷ್ಟಪಟ್ಟಿದ್ದರಿಂದ ಮುಂಬೈ ಮೊದಲ ಪಂದ್ಯದಲ್ಲೇ ಆಡಿಸುವ ಸಾಹಸಕ್ಕೆ ಕೈಹಾಕಿ ಐಪಿಎಲ್​ಗೆ ಹೊಸ ಪ್ರತಿಭೆಯೊಂದನ್ನು ಪರಿಚಯಿಸಿದೆ.

ವಿಘ್ನೇಶ್ ರೂಪದಲ್ಲಿ ಮತ್ತೊಬ್ಬ ಪ್ರತಿಭಾವಂತ ಆಟಗಾರನನ್ನು ಪಡೆದ ಫ್ರಾಂಚೈಸಿಯನ್ನು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ. ಈ ಯುವ ಸ್ಪಿನ್ನರ್ ಮುಂಬರುವ ಪಂದ್ಯಗಳಲ್ಲಿ ಮಿಂಚಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. (ಏಜೆನ್ಸೀಸ್​)