ನವದೆಹಲಿ: ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್ನಲ್ಲಿ ಅಜೇಯ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 13 ವರ್ಷಗಳ ಕಾಯುವಿಕೆಯ ನಂತರ ಟೀಮ್ ಇಂಡಿಯಾ ತನ್ನ ವಿಶ್ವಕಪ್ ಕನಸನ್ನು ನನಸಾಗಿಸಿಕೊಂಡಿದೆ.
ಜೂನ್ 29ರಂದು ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ವಿಶ್ವಕಪ್ಗೆ ಮುತ್ತಿಕ್ಕಿದೆ. ಈ ಸ್ಮರಣೀಯ ಗೆಲುವಿನಿಂದ ಎಲ್ಲ ಆಟಗಾರರು ಮೈದಾನದಲ್ಲಿ ಭಾವುಕರಾದರು ಮತ್ತು ಯಶಸ್ಸನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡರು. ಬಹುತೇಕ ಎಲ್ಲ ಆಟಗಾರರು ತಮ್ಮ ಕುಟುಂಬದೊಂದಿಗೆ ಭಾವನಾತ್ಮಕವಾಗಿ ಸಂಭ್ರಮಿಸಿದರು. ಆದರೆ ಒಬ್ಬ ಆಟಗಾರ ಮಾತ್ರ ತನ್ನ ಗೆಲುವನ್ನು ಏಕಾಂಗಿಯಾಗಿ ಆಚರಿಸಿದರು. ಆ ವಿಡಿಯೋ ಈಗ ವೈರಲ್ ಆಗಿದೆ. ಆ ಆಟಗಾರ ಯಾರು ಎಂಬುದನ್ನು ನಾವೀಗ ತಿಳಿಯೋಣ.
ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ನಂತರ ಆಟಗಾರರು ತಮ್ಮ ಕುಟುಂಬದೊಂದಿಗೆ ಸಂತಸ ಹಂಚಿಕೊಂಡರು. ರೋಹಿತ್ ಶರ್ಮ ತಮ್ಮ ಪತ್ನಿ ರಿತಿಕಾ ಅವರೊಂದಿಗೆ ಯಶಸ್ಸನ್ನು ಹಂಚಿಕೊಂಡರೆ, ಜಡೇಜಾ, ಬುಮ್ರಾ, ವಿರಾಟ್ ಕೊಹ್ಲಿ ಮತ್ತು ಇತರ ಕೆಲವು ಆಟಗಾರರು ತಮ್ಮ ಕುಟುಂಬದೊಂದಿಗೆ ಸಂತೋಷವನ್ನು ಹಂಚಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಗೊತ್ತೇ ಇದೆ. ಆದರೆ, ಇದರಲ್ಲಿ ಒಂದು ಸಂಗತಿಯನ್ನು ನೀವು ಗಮನಿಸಿದ್ದೀರಾ? ಏನದು ಅಂದರೆ, ಭಾರತದ ಎಲ್ಲ ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರೆ, ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮಾತ್ರ ಏಕಾಂಗಿಯಾಗಿ ಗೆಲುವನ್ನು ಸಂಭ್ರಮಿಸಿದರು. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಪಾಂಡ್ಯಗೆ ಈ ಸ್ಥಿತಿ ಬರಬಾರದಿತ್ತು ಎಂದು ಬೇಸರ ಹೊರಹಾಕುತ್ತಿದ್ದಾರೆ. ಅಲ್ಲದೆ, ನತಾಶಾ ವಿರುದ್ಧ ಕಿಡಿಕಾರುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ತ್ರಿವರ್ಣ ಧ್ವಜದೊಂದಿಗೆ ಗೆಲುವನ್ನು ಆಚರಿಸಿದರು. ಹಾರ್ದಿಕ್ ಪತ್ನಿ ನತಾಶಾ ಸ್ಟಾಂಕೋವಿಕ್ ಫೈನಲ್ ಪಂದ್ಯಕ್ಕೆ ಬಾರದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ, ಕೆಲ ದಿನಗಳ ಹಿಂದೆ ಇವರಿಬ್ಬರು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು ಗೊತ್ತೇ ಇದೆ. ಆದರೆ, ಈ ಸುದ್ದಿಗೆ ಈವರೆಗೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಪಾಂಡ್ಯ-ನತಾಶಾ ಬ್ರೇಕ್ ಅಪ್ ಸುದ್ದಿ ಚರ್ಚೆಯಾಗುತ್ತಲೇ ಇದೆ. ಅಲ್ಲದೆ, ಇಬ್ಬರ ನಡೆ ಕೂಡ ಅನುಮಾನ ಹುಟ್ಟಿಸುವಂತಿದೆ.
ಪಂದ್ಯ ಮುಗಿದ ಬಳಿಕ ಹಾರ್ದಿಕ್ ಮೈದಾನದಲ್ಲೇ ವಿಡಿಯೋ ಕಾಲ್ನಲ್ಲಿ ಮಾತನಾಡಿದರು. ಆದರೆ, ಆ ವಿಡಿಯೋ ಕಾಲ್ ಮಾಡಿದ್ದು ಯಾರು ಎಂಬುದು ಬಹಿರಂಗವಾಗಿಲ್ಲ. ನತಾಶಾ ಅವರು ಹಾರ್ದಿಕ್ರಿಂದ ಅಂತರ ಕಾಯ್ದುಕೊಂಡಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ವಿಶ್ವಕಪ್ ಗೆದ್ದ ಬಳಿಕ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಮೈದಾನದಲ್ಲಿ ಓಡಾಡುವ ಮೂಲಕ ಹಾರ್ದಿಕ್ ಗೆಲುವನ್ನು ಸಂಭ್ರಮಿಸಿದರು. ಅಲ್ಲದೆ, ಐಪಿಎಲ್ ವೇಳೆ ತನ್ನನ್ನು ಟ್ರೋಲ್ ಮಾಡಿದ್ದನ್ನು ನೆನೆದು ಕಣ್ಣೀರು ಸಹ ಹಾಕಿದರು. ಆದರೆ, ಟ್ರೋಲ್ ಮಾಡಿದವರಿಗೆ ಹಾರ್ದಿಕ್ ವಿಶ್ವಕಪ್ನಲ್ಲಿ ಉತ್ತರ ನೀಡುವ ಮೂಲಕ ನಾನು ಝೀರೋ ಅಲ್ಲ ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ. (ಏಜೆನ್ಸೀಸ್)