ಕ್ರೀಡೆ

ಅಬ್ಬಾ.. ಎಂಥಾ ಸಿಕ್ಸರ್​ ಇದು! ರಿಂಕು ಸಿಂಗ್​ ಹೊಡೆತಕ್ಕೆ ರಾಕೆಟ್​ನಂತೆ ಹಾರಿ ಹೋದ ಚೆಂಡು, ಇಲ್ಲಿದೆ ರೋಚಕ ವಿಡಿಯೋ

ನವದೆಹಲಿ: ಟೀಮ್​ ಇಂಡಿಯಾದ ಯಂಗ್ ಸೂಪರ್ ಸ್ಟಾರ್ ರಿಂಕು ಸಿಂಗ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಇತ್ತೀಚೆಗಷ್ಟೇ ಐಪಿಎಲ್​ನಲ್ಲಿ ಬೆಸ್ಟ್ ಫಿನಿಶರ್ ಎಂಬ ಟ್ಯಾಗ್ ಪಡೆದಿದ್ದಾರೆ. ಕೊನೆಯ ಓವರ್​ಗಳಲ್ಲಿ ಆತ ಸೃಷ್ಟಿಸುವ ವಿನಾಶ ಅಷ್ಟಿಷ್ಟಲ್ಲ. ರಿಂಕುವಿನ ಸ್ಫೋಟಕ ಇನ್ನಿಂಗ್ಸ್ ಎದುರಾಳಿ ತಂಡದ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನೇ ಅಳಿಸಿಬಿಡುತ್ತದೆ.

ಐಪಿಎಲ್ ಜೊತೆಗೆ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿರುವ ರಿಂಕು ಸಿಂಗ್​, ತನ್ನ ಪ್ರತಿಭೆಯಿಂದ ಭಾರತದ ರಾಷ್ಟ್ರೀಯ ತಂಡವನ್ನೂ ಪ್ರವೇಶಿಸಿದ್ದಾರೆ. ರಿಂಕು ಸಿಂಗ್​ ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಧೈರ್ಯವನ್ನು ತೋರಿಸುತ್ತಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ವಿಫಲರಾದರೂ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದರು. ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ಬಿರುಸಿನ ಆಟವಾಡಿದರು.

ಈ ಇನ್ನಿಂಗ್ಸ್‌ನಲ್ಲಿ ರಿಂಕು ಸಿಂಗ್​ ಆಡಿದ ಒಂದು ದೊಡ್ಡ ಹೊಡೆತದ ಬಗ್ಗೆ ನಾವು ಮಾತನಾಡಬೇಕಾಗಿದೆ. ರಿಂಕು ಸಿಂಗ್ ದೊಡ್ಡ ಸಿಕ್ಸರ್‌ಗಳನ್ನು ಲೀಲಾಜಾಲವಾಗಿ ಬಾರಿಸುತ್ತಾರೆ. ಮೊದಲ ಪಂದ್ಯದ ಸೋಲಿನಿಂದ ತೀವ್ರ ನಿರಾಸೆಗೊಂಡಿದ್ದ ರಿಂಕು, ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಸಿಕ್ಸರ್​ಗಳನ್ನು ಬಾರಿಸಿದರು. ಅದರಲ್ಲಿ ಒಂದು ಸಿಕ್ಸರ್ 104 ಮೀಟರ್ ದೂರ ಸಾಗಿತು. ಕ್ರೀಡಾಂಗಣದ ಆಚೆಗೆ ಹೋಗಿ ಮರಗಳ ಮೇಲೆ ಬಿದ್ದಿತು. ಆ ಸಿಕ್ಸರ್ ನೋಡಿ ಕ್ರಿಕೆಟ್ ಅಭಿಮಾನಿಗಳು ಇದೇ ರಿಂಕು ಪವರ್ ಎನ್ನುತ್ತಿದ್ದಾರೆ.

ಇನಿಂಗ್ಸ್​ನ 19ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಜಿಂಬಾಬ್ವೆ ಬೌಲರ್ ಮುಜರ್ಬಾನಿ ಓವರ್​ನಲ್ಲಿ ಬೃಹತ್ ಸಿಕ್ಸರ್ ಬಾರಿಸಿದರು. ಬಾಲ್ ಗ್ರೌಂಡ್ ಹೊರಬಂದಿರುವುದು ಗಮನಾರ್ಹ. ಅದೇ ಓವರ್‌ನ ಕೊನೆಯ ಎಸೆತದಲ್ಲಿ ರಿಂಕು ಮತ್ತೊಂದು ಸಿಕ್ಸರ್ ಬಾರಿಸಿದರು.

ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕ ಶುಭಮನ್ ಗಿಲ್ ಕೇವಲ 2 ರನ್ ಗಳಿಸಿದರೂ ಅಭಿಷೇಕ್ ಶತಕದ ಜೊತೆಗೆ ಒನ್ ಡೌನ್‌ನಲ್ಲಿ ಬಂದ ರುತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ 77 ರನ್ ಹಾಗೂ ಡೈನಾಮಿಟ್ ರಿಂಕು ಸಿಂಗ್ 22 ಎಸೆತಗಳಲ್ಲಿ 48 ರನ್ ಗಳಿಸಿದ್ದರಿಂದ ಟೀಮ್​ ಇಂಡಿಯಾ ಬೃಹತ್ ಸ್ಕೋರ್ ದಾಖಲಿಸಿತು. ಬಳಿಕ ಭಾರತದ ಬೌಲರ್‌ಗಳು ಜಿಂಬಾಬ್ವೆಯನ್ನು 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಮಾಡಿದರು.

ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳಲ್ಲಿ ವೆಸ್ಲಿ ಮಾಧವೆರೆ 43 ಮತ್ತು ಲ್ಯೂಕ್ ಜೊಂಗ್ವೆ 33 ರನ್‌ಗಳೊಂದಿಗೆ ಮಿಂಚಿದರು. ಉಳಿದ ಬ್ಯಾಟರ್‌ಗಳು ವಿಫಲರಾದರು. ಟೀಮ್​ ಇಂಡಿಯಾದ ಬೌಲರ್​ಗಳ ಪೈಕಿ ಮುಖೇಶ್ ಕುಮಾರ್ 3, ಅವೇಶ್ ಖಾನ್ 3 ಹಾಗೂ ರವಿ ಬಿಷ್ಣೋಯ್ 2 ವಿಕೆಟ್ ಪಡೆದು ಮಿಂಚಿದರು. ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು. ಒಟ್ಟಾರೆ, ಅಭಿಷೇಕ್ ಶರ್ಮ ಅವರ ಪ್ರದರ್ಶನದಿಂದ ಟೀಂ ಇಂಡಿಯಾ 1-1 ರಿಂದ ಸರಣಿಯನ್ನು ಸಮಬಲಗೊಳಿಸಿದೆ ಮತ್ತು ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. (ಏಜೆನ್ಸೀಸ್​)