ಕ್ರೀಡೆ

ಸೂರ್ಯಕುಮಾರ್​, ರಿಂಕು ರೀತಿ ಮತ್ತೊಬ್ಬ ಬ್ಯಾಟರ್​ನನ್ನು ಬೌಲರ್​ ಆಗಿ ಬದಲಾಯಿಸಿದ ಗೌತಮ್​ ಗಂಭೀರ್​!​

ನವದೆಹಲಿ: ಇತ್ತೀಚೆಗಷ್ಟೇ ಟೀಮ್​ ಇಂಡಿಯಾ ಶ್ರೀಲಂಕಾ ವಿರುದ್ಧದ ಮೂರು ಟಿ20 ಪಂದ್ಯದ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿರುವುದು ಗೊತ್ತೇ ಇದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಯುವ ಭಾರತ ತಂಡ ಆಲ್ ರೌಂಡರ್ ಪ್ರದರ್ಶನದಿಂದ ಸರಣಿ ವಶಕ್ಕೆ ಪಡೆಯಿತು. ಗಮನಾರ್ಹ ಸಂಗತಿ ಏನೆಂದರೆ, ಈ ಟಿ20 ಸರಣಿಯಲ್ಲಿ ಬ್ಯಾಟರ್​ಗಳು ಸಹ ಬೌಲಿಂಗ್ ಮಾಡಿದರು. ಅಲ್ಲದೆ ಯಶಸ್ಸು ಕೂಡ ಸಾಧಿಸಿದರು.

ಅರೆಕಾಲಿಕ ಬೌಲರ್‌ಗಳಾಗಿ ರಿಯಾನ್ ಪರಾಗ್, ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್.. ಮುಂತಾದ ಬ್ಯಾಟರ್‌ಗಳು ಶ್ರೀಲಂಕಾ ವಿರುದ್ಧ ತಮ್ಮ ಪ್ರಭಾವ ಬೀರಿದರು. ಕೆಲ ವರ್ಷಗಳ ಹಿಂದೆ ಟೀಮ್​ ಇಂಡಿಯಾದಲ್ಲಿ ಪಾರ್ಟ್ ಟೈಮ್ ಬೌಲರ್​ಗಳ ಸಂಪ್ರದಾಯವಿತ್ತು. ಆದರೆ, ಕೊಹ್ಲಿ ಮತ್ತು ರೋಹಿತ್ ನಾಯಕತ್ವದಲ್ಲಿ ಅದು ಸಂಪೂರ್ಣವಾಗಿ ಕಡಿಮೆಯಾಯಿತು.

ಈ ಹಿಂದೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಟೀಮ್ ಇಂಡಿಯಾದಲ್ಲಿ ಪ್ರಮುಖ ಅರೆಕಾಲಿಕ ಸ್ಪಿನ್ನರ್‌ಗಳಾಗಿದ್ದರು. ಆದರೆ, ನಂತರದ ದಿನಗಳಲ್ಲಿ ಅರೆಕಾಲಿಕ ಸ್ಪಿನ್ನರ್‌ಗಳು ಕಣ್ಮರೆಯಾಗಿದ್ದರು. ತಂಡದಲ್ಲಿ ಬ್ಯಾಟರ್‌ಗಳು, ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳು ಎಂದು ಆಟಗಾರರನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಆದರೆ, ಇದೀಗ ಗೌತಮ್ ಗಂಭೀರ್ ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ಬಂದ ಮೇಲೆ ಲೆಕ್ಕಾಚಾರವೇ ಬದಲಾಗಿದೆ. ಬ್ಯಾಟರ್​ಗಳನ್ನು ಸಹ ಬೌಲಿಂಗ್​ ಅಭ್ಯಾಸಕ್ಕೆ ಬಿಡಲಾಗುತ್ತಿದೆ. ಪಂದ್ಯದಲ್ಲಿ ಬೇಕಾದ ಸಮಯಕ್ಕೆ ಅರೆಕಾಲಿಕ ಬೌಲರ್​ ಇಳಿಸುವ ಮಾಸ್ಟರ್​ ಪ್ಲಾನ್​ ಅನ್ನು ಗಂಭೀರ್​ ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾಗೆ ತನ್ನ ಹಳೆಯ ಸೂತ್ರವನ್ನು ಮರಳಿ ತರುವ ಮೂಲಕ ಗಂಭೀರ್ ಯಶಸ್ವಿಯಾಗಿದ್ದಾರೆ.

ಏಕದಿನ ಸರಣಿಯಲ್ಲೂ ಟಿ20 ಸರಣಿಯ ಯಶಸ್ವಿ ಸೂತ್ರವನ್ನು ಮುಂದುವರಿಸುವ ಆಶಯವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ರಿಂಕು ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತೆ ಏಕದಿನದಲ್ಲಿ ಪಾರ್ಟ್ ಟೈಮ್ ಬೌಲರ್​​ನನ್ನು ತಯಾರು ಮಾಡುತ್ತಿದ್ದಾರೆ. ಆ ಕ್ರಿಕೆಟಿಗ ಬೇರೆ ಯಾರೂ ಅಲ್ಲ ಶ್ರೇಯಸ್ ಅಯ್ಯರ್.

ಏಕದಿನ ತಂಡದಲ್ಲಿ ಅತ್ಯಂತ ಮಹತ್ವದ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬರುವ ಅಯ್ಯರ್ ಈಗ ಅರೆಕಾಲಿಕ ಬೌಲರ್ ಆಗಿ ತಂಡದಲ್ಲಿ ತಮ್ಮ ಪಾತ್ರವನ್ನು ಹೆಚ್ಚಿಸಲಿದ್ದಾರೆ. ಶುಕ್ರವಾರ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದರು ಮತ್ತು ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಬ್ಯಾಟ್ಸ್‌ಮನ್‌ಗಳು ಈ ರೀತಿಯ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಇದು ತಂಡಕ್ಕೆ ಕೆಲವೊಮ್ಮೆ ಉಪಯುಕ್ತವಾಗುತ್ತದೆ ಎಂಬುದು ಗಂಭೀರ್​ ಯೋಜನೆಯಾಗಿದೆ. (ಏಜೆನ್ಸೀಸ್​)