ಕ್ರೀಡೆ

ಮುಖ್ಯ ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಆಟಗಾರರಿಗೆ ಬೆವರಿಳಿಸಿದ ಗೌತಮ್​ ಗಂಭೀರ್​!

ನವದೆಹಲಿ: ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗೌತಮ್ ಗಂಭೀರ್ ತಮ್ಮ ಮೊದಲ ಅಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಯುವ ಟೀಮ್ ಇಂಡಿಯಾದೊಂದಿಗೆ ಶ್ರೀಲಂಕಾಗೆ ತೆರಳಿರುವ ಗಂಭೀರ್​, ತಮ್ಮ ಮೊದಲ ಪ್ರಯತ್ನದಲ್ಲೇ ಭರ್ಜರಿ ಯಶಸ್ಸು ಕಾಣಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕಠಿಣ ಅಭ್ಯಾಸದ ಮೊರೆ ಹೋಗಿದ್ದಾರೆ.

ಇದೇ ತಿಂಗಳ 27ರಿಂದ ಶ್ರೀಲಂಕಾ ವಿರುದ್ಧ ಭಾರತ ತಂಡ ಮೂರು ಟಿ20 ಹಾಗೂ ಮೂರು ಏಕದಿನ ಸರಣಿಗಳನ್ನು ಆಡಲಿದೆ. ನಿನ್ನೆ (ಜುಲೈ 23) ಶ್ರೀಲಂಕಾ ನೆಲಕ್ಕೆ ಕಾಲಿಟ್ಟ ಬಳಿಕ ಪಲ್ಲೆಕಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಮ್​ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಕೋಚ್‌ ಆಗಿ ಗಂಭೀರ್‌ಗೆ ಇದು ಮೊದಲ ಅಭ್ಯಾಸ ಸೆಷನ್‌ ಆಗಿರುವುದರಿಂದ ಎಲ್ಲರ ಕಣ್ಣು ಅವರ ಮೇಲಿತ್ತು. ಆದರೆ, ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಅಭ್ಯಾಸದಲ್ಲೇ ಯಾವುದೇ ವಿನಾಯಿತಿ ನೀಡದ ಗಂಭೀರ್​, ಆಟಗಾರರನ್ನು ಬೆಂಡೆತ್ತಿದರು. ಮೊದಲ ದಿನವೇ ತಮ್ಮ ಟ್ರೇಡ್ ಮಾರ್ಕ್ ಅಭ್ಯಾಸದಿಂದ ಆಟಗಾರರ ಬೆವರಿಳಿಸಿದರು.

ಮುಖ್ಯ ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್​ ಎಂದು ಶೀರ್ಷಿಕೆ ನೀಡಿ ಬಿಸಿಸಿಐ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಗಂಭೀರ್​ ಅವರು ಟೀಮ್​ ಇಂಡಿಯಾ ಆಟಗಾರರಿಗೆ ಕಠಿಣ ತರಬೇತಿ ನೀಡುತ್ತಿರುವ ದೃಶ್ಯವಿದೆ. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಕ್ರಿಕೆಟ್​ ರಾಕ್ಷಸನ ಜತೆಗಿನ ಕೆಲಸ ಇದೇ ರೀತಿ ಇರುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ಟೀಮ್​ ಇಂಡಿಯಾ ಇದೇ ತಿಂಗಳ 27, 28 ಮತ್ತು 30 ರಂದು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಯುವ ತಂಡ ಶ್ರೀಲಂಕಾವನ್ನು ಎದುರಿಸಲಿದೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಭಾರತ ತಂಡ ಬಲಿಷ್ಠ ತಂಡವನ್ನು ಎದುರಿಸಲಿದೆ. ಅದೇನೇ ಇರಲಿ ತಂಡದಲ್ಲಿ ಯುವ ಆಟಗಾರರೆಲ್ಲ ಇದ್ದರೂ ಗಂಭೀರ್ ಮುಖ್ಯ ಕೋಚ್ ಆಗಿರುವುದರಿಂದ ಭಾರತ ಕ್ರಿಕೆಟ್ ಅಭಿಮಾನಿಗಳು ತಂಡದ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)