ಕ್ರೀಡೆ

VIDEO| ಸನ್ಮಾನ ಸಮಾರಂಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ವಿನೇಶ್​ ಪೋಗಟ್​

ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದ ಕುಸ್ತಿಪಟು ವಿನೇಶ್​ ಪೋಗಟ್​ ಭಾರತಕ್ಕೆ ಮರಳಿದ್ದು, ಅವರಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ನೂರಾರು ಅಭಿಮಾನಿಗಳು ಡೋಲು ಬಾರಿಸಿ, ನೋಟು ಹಾಗೂ ಹೂವಿನ ಹಾರ ಹಾಕಿ, ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು. ಅವರಿಗೆ ಕುಸ್ತಿಪಟು ಭಜರಂಗ್​ ಪೂನಿಯಾ ಸಾಥ್​ ನೀಡಿದ್ದರು.

ತೂಕದ ಕಾರಣಕ್ಕಾಗಿ ಒಲಿಂಪಿಕ್ಸ್‌ನಿಂದ ಹೊರಹಾಕಲ್ಪಟ್ಟಿದ್ದ ಕುಸ್ತಿಪಟು ವಿನೇಶ್ ಫೋಗಟ್ ತವರಿಗೆ ಮರಳಿದ್ದಾರೆ. ಅವರಿಗೆ ಸ್ವಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿನೇಶ್​ ಮೂರ್ಛೆ ಹೋಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವಿನೇಶ್​ ಬೇಗನೆ ಚೇತರಿಸಿಕೊಳ್ಳಲಿ ಎಂದು ಜನರು ಆಶಿಸಿದ್ದಾರೆ.

ವೈರಲ್​​ ಆಗಿರುವ ವಿಡಿಯೋ ನೋಡುವುದಾದರೆ, ವೇದಿಕೆಯಲ್ಲಿ ಆಸೀನರಾಗಿರುವ ವಿನೇಶ್​ ಏಕಾಏಕಿ ಮೂರ್ಛೆ ಹೋಗುತ್ತಾರೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಆಕೆಗೆ ಗಾಳಿಯನ್ನು ಬೀಸುತ್ತಿರುವುದನ್ನು ನೋಡಬಹುದಾಗಿದೆ. ಸಹ ಆಟಗಾರ ಭಜರಂಗ್​ ಪೂನಿಯಾ ವಿನೇಶ್​ಗೆ ನೀರು ನೀಡಿದ ಉಪಚರಿಸಿದ್ದು, ಅವರ ಆರೋಗ್ಯವನ್ನು ವಿಚಾರಿಸುತ್ತಿರುವುದನ್ನು ನೋಡಬಹುದಾಗಿದೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿನ ಅಭೂತಪೂರ್ವ ಪ್ರದರ್ಶನಕ್ಕೆ ವಿನೇಶ್​ ಅವರ ಸ್ವಗ್ರಾಮ ಬಲಾಲಿಯಲ್ಲಿ ಗ್ರಾಮದ ಹಿರಿಯರು, ಮುಖಂಡರು ಚಿನ್ನದ ಪದಕ ನೀಡಿದ ಸನ್ಮಾನಿಸಿದ್ದಾರೆ. ಬೆಳ್ಳಿ ಪದಕದಿಂದ ವಂಚಿತರಾದ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿರುವ ಗ್ರಾಮದ ಮುಖಂಡರು ನ್ಯಾಯ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.