ಕ್ರೀಡೆ

ವಿದರ್ಭ ರಣಜಿ ಟ್ರೋಫಿ ಚಾಂಪಿಯನ್​; ದೇಶೀಯ ಕ್ರಿಕೆಟ್​ ಋತು ಮುಕ್ತಾಯ; ಇನ್ನು ಐಪಿಎಲ್​ಗೆ ಕ್ಷಣಗಣನೆ!

ನಾಗ್ಪುರ: ದೇಶೀಯ ಕ್ರಿಕೆಟ್​ ಋತುವಿನಲ್ಲಿ ಕನಸಿನ ಓಟವನ್ನು ವಿಸ್ತರಿಸಿರುವ ಆತಿಥೇಯ ವಿದರ್ಭ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ 90ನೇ ಆವೃತ್ತಿಯಲ್ಲಿ ಅಜೇಯವಾಗಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಇದರೊಂದಿಗೆ ದೇಶೀಯ ಕ್ರಿಕೆಟ್​ನಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಜಾಮ್ತಾದ ವಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಫೈನಲ್​ನಲ್ಲಿ ವಿದರ್ಭ ಹಾಗೂ ಕೇರಳ ತಂಡಗಳು ಡ್ರಾಗೆ ಸಮಾಧಾನ ಕಂಡವು. ಮೊದಲ ಇನಿಂಗ್ಸ್​ನಲ್ಲಿ ಸಾಧಿಸಿದ 37 ರನ್​ಗಳ ಅಮೂಲ್ಯ ಮುನ್ನಡೆ ಆಧಾರದಲ್ಲಿ ಅಕ್ಷಯ್​ ವಾಡ್ಕರ್​ ಸಾರಥ್ಯದ ವಿದರ್ಭ ತಂಡ 2018-19ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಎತ್ತಿ ಹಿಡಿಯಿತು. ಜತೆಗೆ ಕಳೆದ ಬಾರಿ ಕೈತಪ್ಪಿದ ಕಿರೀಟವನ್ನು ಈ ಬಾರಿ ತವರಿನ ಅಂಗಣದಲ್ಲಿ ಒಲಿಸಿಕೊಳ್ಳುವಲ್ಲಿ ಸಫಲವಾಯಿತು. ಈ ಮೂಲಕ 2024-25ರ ದೇಶೀಯ ಕ್ರಿಕೆಟ್​ ಋತುವಿಗೆ ತೆರೆ ಬಿದ್ದಿದೆ. ಇನ್ನು ಎಲ್ಲ ದೇಶೀಯ ಆಟಗಾರರು ಐಪಿಎಲ್​ 18ನೇ ಆವೃತ್ತಿಯ ಸಿದ್ಧತೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಪಂದ್ಯದ ಐದನೇ ಹಾಗೂ ಅಂತಿಮ ದಿನ 4 ವಿಕೆಟ್​ಗೆ 249 ರನ್​ಗಳಿಂದ ಎರಡನೇ ಇನಿಂಗ್ಸ್​ ಮುಂದುವರಿಸಿದ ವಿದರ್ಭ, ಶತಕ ಸಾಧಕ ಕನ್ನಡಿಗ ಕರುಣ್​ ನಾಯರ್​ (135) ವಿಕೆಟ್​ ಬೇಗನೆ ಕಳೆದುಕೊಂಡಿತು. ನಂತರ ಕೆಳ ಕ್ರಮಾಂಕದಲ್ಲಿ ದರ್ಶನ್​ ನಲ್ಕಂಡೆ (51* ರನ್​, 98 ಎಸೆತ, 3 ಬೌಂಡರಿ, 1 ಸಿಕ್ಸರ್​) ಅರ್ಧಶತಕದ ನೆರವಿನಿಂದ ಚಹಾ ವಿರಾಮಕ್ಕೆ 143.5 ಓವರ್​ಗಳಲ್ಲಿ 9 ವಿಕೆಟ್​ಗೆ 375 ರನ್​ಗಳಿಸಿತು. ಒಟ್ಟಾರೆ 412 ರನ್​ಗಳ ಮುನ್ನಡೆಯೊಂದಿಗೆ ವಿದರ್ಭ ಡಿಕ್ಲೇರ್​ ಮಾಡಿಕೊಂಡಿತು. ಆಗ ಉಭಯ ತಂಡಗಳ ಆಟಗಾರರ ಹಸ್ತಲಾವದೊಂದಿಗೆ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಇದರೊಂದಿಗೆ ಕೇರಳ ತಂಡದ ಚೊಚ್ಚಲ ಟ್ರೋಫಿ ಕನಸು ಅಧಿಕೃತವಾಗಿ ಭಗ್ನಗೊಂಡಿತು.

ವಿದರ್ಭ ಪಾಲಿಗೆ ಮೂರನೇ ರಣಜಿ ಟ್ರೋಫಿ ಕಿರೀಟ ಇದಾಗಿದೆ. ಇದಕ್ಕೂ ಮುನ್ನ 2017-18 ಹಾಗೂ 2018-19ರ ಆವೃತ್ತಿಯಲ್ಲಿ ಚಾಂಪಿಯನ್​ ಎನಿಸಿದರೆ, 2023-24ರಲ್ಲಿ ರನ್ನರ್​ ಅಪ್​ಗೆ ತೃಪ್ತಿಪಟ್ಟಿತು. ವಿದರ್ಭ ತಂಡ ಹಾಲಿ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ದಾಖಲಿಸಿದ್ದು, 2ರಲ್ಲಿ ಮೊದಲ ಇನಿಂಗ್ಸ್​ ಮುನ್ನಡೆಯೊಂದಿಗೆ ಡ್ರಾ ಸಾಧಿಸಿದೆ.

ವಿದರ್ಭ: 379 ಹಾಗೂ 143.5 ಓವರ್​ಗಳಲ್ಲಿ 9 ವಿಕೆಟ್​ಗೆ 375 (ಕರುಣ್​ 132, ಅಕ್ಷಯ್​ 25, ಹರ್ಷ್​ 4, ಅಕ್ಷಯ್​ ಕೆ.30, ದರ್ಶನ್​ 51, ಆದಿತ್ಯ ಸರ್ವಟೆ 96ಕ್ಕೆ 4). ಕೇರಳ: 125 ಓವರ್​ಗಳಲ್ಲಿ 342.

ಪಂದ್ಯಶ್ರೇಷ್ಠ: ದಾನಿಶ್​ ಮಾಲೇವಾರ್​, ಸರಣಿಶ್ರೇಷ್ಠ: ಹರ್ಷ್​ ದುಬೆ (472 ರನ್​, 69 ವಿಕೆಟ್​).

ಟೂರ್ನಿಯ ಗರಿಷ್ಠ ರನ್​ ಸ್ಕೋರರ್​: ಯಶ್​ ರಾಥೋಡ್​ (960 ರನ್​). ಗರಿಷ್ಠ ವಿಕೆಟ್​: ಹರ್ಷ್​ ದುಬೆ (69 ವಿಕೆಟ್​).