ಕ್ರೀಡೆ

ಕಾಲೆಳೆಯಲು ಬಂದ ಪಾಕ್ ಪತ್ರಕರ್ತನಿಗೆ ವೆಂಕಟೇಶ್ ಪ್ರಸಾದ್ ದಿಟ್ಟ ತಿರುಗೇಟು!

ನವದೆಹಲಿ: ದಿಗ್ಗಜ ರಾಹುಲ್ ದ್ರಾವಿಡ್ ಅವರ ಜಾಹೀರಾತಿನ ‘ಇಂದಿರಾನಗರದ ಗೂಂಡಾ’ ಪದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ. ಹಲವು ಸೆಲೆಬ್ರಿಟಿಗಳು ಕೂಡ ಇದೇ ಗುಂಗಿನಲ್ಲಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಾಲ್ಯದ ಚಿತ್ರವೊಂದರ ಜತೆಗೆ ‘ನಾನು ಇಂದಿರಾನಗರದ ಗೂಂಡಿ’ ಎಂದು ಪೋಸ್ಟ್ ಮಾಡಿದ್ದರು. ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕೂಡ ಇದೀಗ ‘ನಾನು ಇಂದಿರಾನಗರದ ಗೂಂಡ’ ಎನ್ನುತ್ತ ಪಾಕ್ ಪತ್ರಕರ್ತನೊಬ್ಬನಿಗೆ ದಿಟ್ಟವಾಗಿ ತಿರುಗೇಟು ನೀಡಿದ್ದಾರೆ.

ಸದ್ಯ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್‌ನಲ್ಲಿ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸುತ್ತಿರುವ ವೆಂಕಟೇಶ್ ಪ್ರಸಾದ್ 1996ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್​ಫೈನಲ್‌ನಲ್ಲಿ ಆಮೀರ್ ಸೋಹೈಲ್‌ರಿಂದ ಬೌಂಡರಿ ಚಚ್ಚಿಸಿಕೊಂಡು ಮರು ಎಸೆತದಲ್ಲೇ ವಿಕೆಟ್ ಉರುಳಿಸಿದ ಕ್ಷಣಗಳ ಚಿತ್ರದೊಂದಿಗೆ, ‘ನಾನು ಇಂದಿರಾನಗರದ ಗೂಂಡಾ’ ಎಂದು ಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಪತ್ರಕರ್ತ ನಜೀಬ್ ಉಲ್ ಹಸ್‌ನೈನ್, ‘ಪ್ರಸಾದ್ ಜೀವಮಾನದ ಸಾಧನೆ ಇದೊಂದೇ’ ಎಂಬ ಕಾಮೆಂಟ್‌ನೊಂದಿಗೆ ಟ್ರೋಲ್ ಮಾಡಲು ಯತ್ನಿಸಿದ್ದ.

ಪಾಕ್ ಪತ್ರಕರ್ತನ ಟ್ವೀಟ್‌ಗೆ ದಿಟ್ಟ ತಿರುಗೇಟು ನೀಡಿರುವ ವೆಂಕಟೇಶ್ ಪ್ರಸಾದ್, ‘ಇಲ್ಲ ನಜೀಬ್ ಭಾಯಿ. ನನ್ನ ಕೆಲ ಸಾಧನೆಗಳು ನಂತರದಲ್ಲಿ ಬಂದಿದ್ದವು. ಅದರ ನಂತರದ ವಿಶ್ವಕಪ್‌ನಲ್ಲಿ 1999ರಲ್ಲಿ ಇಂಗ್ಲೆಂಡ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಪಾಕಿಸ್ತಾನ ವಿರುದ್ಧ 27 ರನ್‌ಗೆ 5 ವಿಕೆಟ್ ಕಬಳಿಸಿದ್ದೆ. ಆಗ ಪಾಕಿಸ್ತಾನ 228 ರನ್ ಬೆನ್ನಟ್ಟಲು ಕೂಡ ವಿಫಲವಾಗಿತ್ತು. ದೇವರು ನಿಮಗೆ ಒಳಿತು ಮಾಡಲಿ’ ಎಂದು ಟ್ವೀಟಿಸಿದ್ದಾರೆ.