ಕ್ರೀಡೆ

ಭಾರತದ 84ನೇ ಗ್ರಾಂಡ್​ ಮಾಸ್ಟರ್ ಪಟ್ಟವೇರಿದ ವೈಶಾಲಿ​

ಚೆನ್ನೈ: ತಮಿಳುನಾಡಿನ ವೈಶಾಲಿ ರಮೇಶ್​ ಬಾಬು ಚದುರಂಗ ಕ್ರೀಡೆಯಲ್ಲಿ ಭಾರತದ 84ನೇ ಗ್ರಾಂಡ್​ ಮಾಸ್ಟರ್​ ಎನಿಸಿದ್ದಾರೆ. ಚೆಸ್​ ವಿಶ್ವಕಪ್​ ರನ್ನರ್​ಅಪ್​ ಆರ್​. ಪ್ರಜ್ಞಾನಂದ ಅವರ ಸಹೋದರಿಯಾಗಿರುವ ವೈಶಾಲಿ, ದೇಶದ 3ನೇ ಮಹಿಳಾ ಗ್ರಾಂಡ್​ ಮಾಸ್ಟರ್​ ಆಗಿದ್ದಾರೆ. ಜತೆಗೆ, ವೈಶಾಲಿ-ಪ್ರಜ್ಞಾನಂದ ಚೆಸ್​ನಲ್ಲಿ ಗ್ರಾಂಡ್​ ಮಾಸ್ಟರ್​ ಪಟ್ಟವೇರಿದ ಮೊಟ್ಟಮೊದಲ ಅಕ್ಕ-ತಮ್ಮ ಜೋಡಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ಸ್ಪೇನ್​ನಲ್ಲಿ ಶುಕ್ರವಾರ ಎಲ್​. ಲೊಬ್ರೆಗಟ್​ ಓಪನ್​ನಲ್ಲಿ 2,500 ರೇಟಿಂಗ್​ ಪಾಯಿಂಟ್ಸ್​ ಕಲೆಹಾಕುವ ಮೂಲಕ 22 ವರ್ಷದ ವೈಶಾಲಿ ಗ್ರಾಂಡ್​ ಮಾಸ್ಟರ್​ ಪಟ್ಟ ಒಲಿಸಿಕೊಂಡರು. ಕೊನೆರು ಹಂಪಿ (2002), ದ್ರೋಣವಲ್ಲಿ ಹರಿಕಾ (2011) ದೇಶದ ಮೊದಲಿಬ್ಬರು ಮಹಿಳಾ ಗ್ರಾಂಡ್​ ಮಾಸ್ಟರ್​ಗಳಾಗಿದ್ದಾರೆ. ಪ್ರಜ್ಞಾನಂದ 2018ರಲ್ಲಿ 12ನೇ ವಯಸ್ಸಿನಲ್ಲೇ ಗ್ರಾಂಡ್​ ಮಾಸ್ಟರ್​ ಆಗಿದ್ದರು.

"ಕೊನೆಗೂ ಗ್ರಾಂಡ್​ ಮಾಸ್ಟರ್​ ಪಟ್ಟಕ್ಕೇರಿದ ಬಗ್ಗೆ ಖುಷಿ ಇದೆ. ಸದ್ಯ 2 ಸುತ್ತಿನ ಪಂದ್ಯಗಳು ಮಾತ್ರ ನಡೆದಿದ್ದು, ನಾನೀಗ ಟೂರ್ನಿಯತ್ತ ಸಂಪೂರ್ಣ ಗಮನಹರಿಸಿರುವೆ. ಆದರೆ ಜಿಎಂ ಪಟ್ಟ ಸಂಭ್ರಮ ತಂದಿದೆ. ನಾನು ಚೆಸ್​ ಆಡಲು ಆರಂಭಿಸಿದ ದಿನದಿಂದಲೂ ಇದನ್ನು ಸಾಧಿಸುವ ಆಸೆ ಇತ್ತು. ಇದಕ್ಕೆ ಹತ್ತಿರವಾದಾಗ ನನ್ನ ಮೇಲೆ ಒತ್ತಡವೂ ಹೆಚ್ಚಿತ್ತು' ಎಂದು ವೈಶಾಲಿ ತಿಳಿಸಿದ್ದಾರೆ.

ಪ್ರಜ್ಞಾನಂದ್​ರಂತೆ ವೈಶಾಲಿ ಕೂಡ ತಂದೆ ರಮೇಶ್​ಬಾಬು ಅವರಿಂದಾಗಿ ಬಾಲ್ಯದಲ್ಲಿ ಚೆಸ್​ ಆಟ ಆಡಲಾರಂಭಿಸಿದ್ದರು. ಮಗಳ ಸಾಮರ್ಥ್ಯವನ್ನು ಅರಿತು ರಮೇಶ್​ಬಾಬು, 5ನೇ ವಯಸ್ಸಿನಲ್ಲೇ ಚೆಸ್​ ತರಬೇತಿಗೆ ಸೇರಿಸಿದ್ದರು. ವೈಶಾಲಿ ಇದುವರೆಗೆ ಹಲವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇತ್ತೀಚೆಗೆ ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ ಬೆಳ್ಳಿ ಗೆದ್ದ ಭಾರತ ತಂಡದ ಭಾಗವೂ ಆಗಿದ್ದರು.