ಕಾನ್ಪುರ: ಭಾರತ-ಬಾಂಗ್ಲಾ ಟೆಸ್ಟ್ ವೇಳೆ ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ಮಂಗಗಳ ಕಾಟವನ್ನು ತಪ್ಪಿಸುವ ಸಲುವಾಗಿ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಲಂಗೂರ್ಗಳನ್ನು ಬಳಸಿಕೊಂಡಿವೆ.
ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳ ವೇಳೆ ಮಂಗಗಳಿಂದ ತೊಂದರೆ ಎದುರಿಸುವುದು ಈ ಹಿಂದೆ ಸಾಮಾನ್ಯವೆನಿಸಿತ್ತು. ಪ್ರೇಕ್ಷಕರಿಂದ ಆಹಾರ ಪದಾರ್ಥಗಳನ್ನು ಕಸಿದುಕೊಳ್ಳುವ ಮಂಗಗಳು, ಪಂದ್ಯದ ನೇರಪ್ರಸಾರದ ಚಿತ್ರೀಕರಣ ಮಾಡುವಾಗ ಕ್ಯಾಮರಾಮನ್ಗಳಿಗೂ ತೀವ್ರ ತೊಂದರೆಗಳನ್ನು ನೀಡಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಯುಪಿಸಿಎ ಈ ಬಾರಿ ಮಂಗಗಳನ್ನು ಓಡಿಸಲು ಲಂಗೂರ್ಗಳನ್ನು ಬಳಸಿಕೊಂಡಿವೆ.
ಮಂಗಗಳ ಭಯವನ್ನು ನಿವಾರಿಸಲು ನಮಗೆ ಲಂಗೂರ್ಗಳ ಬಳಕೆ ಅಗತ್ಯವಾಗಿತ್ತು ಎಂದು ಸ್ಟೇಡಿಯಂ ನಿರ್ದೇಶಕ ಸಂಜಯ್ ಕಪೂರ್ ತಿಳಿಸಿದ್ದಾರೆ. ಲಂಗೂರ್ಗಳು ಕೋತಿಗಳ ಜಾತಿಗೇ ಸೇರಿದ್ದರೂ, ಕಪ್ಪಾದ ಮೂತಿ ಮತ್ತು ಉದ್ದನೆಯ ಬಾಲಗಳನ್ನು ಹೊಂದಿರುತ್ತವೆ. ಲಂಗೂರ್ಗಳಿಗೆ ಮಂಗಗಳು ಹೆದರುವುದರಿಂದ ಅವುಗಳ ಹತ್ತಿರಕ್ಕೆ ಹೋಗುವುದಿಲ್ಲ. ಹೀಗಾಗಿ ಮಂಗಗಳನ್ನು ಓಡಿಸಲು ಇವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.