ಕ್ರೀಡೆ

ಮಿಂಚಿದ ಅರ್ಷದೀಪ್​, ಸೂರ್ಯಕುಮಾರ್​; ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಜಯದೊಂದಿಗೆ ಸೂಪರ್​-8 ಪ್ರವೇಶಿಸಿದ ಭಾರತ

ನ್ಯೂಯಾರ್ಕ್​: ಎಡಗೈ ವೇಗಿ ಅರ್ಷದೀಪ್​ ಸಿಂಗ್​ (9ಕ್ಕೆ 4) ಜೀವನಶ್ರೇಷ್ಠ ಬೌಲಿಂಗ್​ ಮತ್ತು ಸೂರ್ಯಕುಮಾರ್​ ಯಾದವ್​ (50*ರನ್​, 49 ಎಸೆತ, 2 ಬೌಂಡರಿ, 2 ಸಿಕ್ಸರ್​) ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಟೀಮ್​ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ತನ್ನ 3ನೇ ಲೀಗ್​ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದೆ. ಹ್ಯಾಟ್ರಿಕ್​ ಗೆಲುವಿನೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡ ರೋಹಿತ್​ ಶರ್ಮ, ಸೂಪರ್​&8 ಪ್ರವೇಶವನ್ನೂ ಖಾತ್ರಿಪಡಿಸಿಕೊಂಡಿದೆ.

ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾದಾಟದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಅಮೆರಿಕ, ಸಂಟಿತ ದಾಳಿಗೆ ಮಂಕಾಗಿ ನಿತೀಶ್​ ಕುಮಾರ್​ (27) ಹಾಗೂ ಸ್ಟೀವನ್​ ಟೇಲರ್​ (24) ಕೊಡುಗೆಯಿಂದ 7 ವಿಕೆಟ್​ಗೆ 110 ರನ್​ಗಳ ಗೌರವಯುತ ಮೊತ್ತ ಪೇರಿಸಿತು. ಪ್ರತಿಯಾಗಿ ಭಾರತ 18.2 ಓವರ್​ಗಳಲ್ಲಿ 3 ವಿಕೆಟ್​ಗೆ 111 ರನ್​ ಗಳಿಸಿ ಜಯ ದಾಖಲಿಸಿತು.

ಚೇಸಿಂಗ್​ನಲ್ಲಿ ತಿಣುಕಾಡಿದ ಭಾರತ: ಸಾಧಾರಣ ಮೊತ್ತದ ಚೇಸಿಂಗ್​ ವೇಳೆ ಭಾರತ ಆರಂಭಿಕ ಆಘಾತ ಎದುರಿಸಿತು. ಕಳೆದೆರಡು ಪಂದ್ಯಗಳಲ್ಲಿ ಒಂದಂಕಿ ಗಳಿಸಿದ್ದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಈ ಬಾರಿ ಖಾತೆಯನ್ನೂ ತೆರೆಯದೆ ನಿರಾಸೆ ಮೂಡಿಸಿದರು. ಇನಿಂಗ್ಸ್​ನ 2ನೇ ಎಸೆತದಲ್ಲಿ ಮುಂಬೈ ಮೂಲದ ಎಡಗೈ ವೇಗಿ ಸೌರಭ್​ ನೇತ್ರವಲ್ಕರ್​ (18ಕ್ಕೆ 2) ಎಸೆತದಲ್ಲಿ ಕೊಹ್ಲಿ ಕೀಪರ್​ಗೆ ಕ್ಯಾಚ್​ ನೀಡಿದರು. ನೇತ್ರವಲ್ಕರ್​ರ ಮರುಓವರ್​ನಲ್ಲಿ ನಾಯಕ ರೋಹಿತ್​ ಶರ್ಮ (3) ಕೂಡ ವಿಕೆಟ್​ ಒಪ್ಪಿಸಿದರು. ಪವರ್​ಪ್ಲೇನಲ್ಲಿ ಭಾರತ 33 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ಪರದಾಡಿತು. ರಿಷಭ್​ ಪಂತ್​&ಸೂರ್ಯಕುಮಾರ್​ ಜೋಡಿ 3ನೇ ವಿಕೆಟ್​ಗೆ 29 ರನ್​ ಸೇರಿಸಿ ಭಾರತಕ್ಕೆ ತುಸು ಚೇತರಿಕೆ ಒದಗಿಸಿದರು. ಪಂತ್​ ಕೂಡ ಔಟಾದ ನಂತರದಲ್ಲಿ ಸೂರ್ಯಕುಮಾರ್​ಗೆ ಶಿವಂ ದುಬೆ (31*) ಉತ್ತಮ ಬೆಂಬಲ ಒದಗಿಸಿದರು. ಸೂರ್ಯ&ದುಬೆ ಮುರಿಯದ 4ನೇ ವಿಕೆಟ್​ಗೆ 65 ಎಸೆತಗಳಲ್ಲಿ 67 ರನ್​ ಸೇರಿಸಿ ಭಾರತವನ್ನು ಸುರತವಾಗಿ ಗೆಲುವಿನ ದಡ ಸೇರಿಸಿದರು.