ಕ್ರೀಡೆ

ಯುಎಸ್ ಓಪನ್‌ನಲ್ಲಿ 4ನೇ ಸುತ್ತಿಗೇರಿದ ಜೋಕೊವಿಕ್, ಕ್ವಿಟೋವಾ, ಕೆರ್ಬರ್

ನ್ಯೂಯಾರ್ಕ್: ವಿಶ್ವ ನಂ. 1 ನೊವಾಕ್ ಜೋಕೊವಿಕ್, ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್, ಜಪಾನ್ ತಾರೆ ನವೊಮಿ ಒಸಾಕಾ, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಜರ್ಮನಿಯ ಏಂಜೆಲಿಕ್ ಕೆರ್ಬರ್ ಅವರು ಕರೊನಾ ಹಾವಳಿಯ ನಡುವೆ ನಡೆಯುತ್ತಿರುವ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಯುಎಸ್ ಓಪನ್‌ನಲ್ಲಿ ನಾಲ್ಕನೇ ಸುತ್ತಿಗೇರಿದ್ದಾರೆ.

ಅಗ್ರ ಶ್ರೇಯಾಂಕಿತ ಸೆರ್ಬಿಯಾ ತಾರೆ ಜೋಕೊವಿಕ್ 3ನೇ ಸುತ್ತಿನಲ್ಲಿ ಜರ್ಮನಿಯ ಜನ್ ಲೆನ್ನಾರ್ಡ್ ಸ್ಟ್ರ್ ವಿರುದ್ಧ 6-3, 6-3, 6-1 ನೇರಸೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದರು. ನಡಾಲ್, ಫೆಡರರ್ ಗೈರಿನಲ್ಲಿ 18ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಜೋಕೋ, ಈ ವರ್ಷದ ಅಜೇಯ ಗೆಲುವಿನ ಓಟವನ್ನು ಸತತ 26ನೇ ಪಂದ್ಯಕ್ಕೆ ವಿಸ್ತರಿಸಿದರು. ಹಾರ್ಡ್ ಕೋರ್ಟ್‌ನಲ್ಲಿ ಇದು ಅವರಿಗೆ ವೃತ್ತಿಜೀವನದ 600ನೇ ಗೆಲುವಾಗಿದೆ.

ಇದೀಗ ಜೋಕೊ ಹೊರತಾಗಿ 2014ರ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್ ಮಾತ್ರ ಟೂರ್ನಿಯ ಕಣದಲ್ಲಿ ಉಳಿದಿರುವ ಗ್ರಾಂಡ್ ಸ್ಲಾಂ ವಿಜೇತ ಆಟಗಾರರಾಗಿದ್ದಾರೆ. ಸ್ಪೇನ್‌ನ ಪ್ಯಾಲ್ಬೊ ಕರ‌್ರೆನೊ ಬುಸ್ಟಾ 4ನೇ ಸುತ್ತಿನಲ್ಲಿ ಜೋಕೋಗೆ ಸವಾಲೊಡ್ಡಲಿದ್ದಾರೆ.

4ನೇ ಶ್ರೇಯಾಂಕಿತ ಸ್ಟೆಫಾನೊಸ್ ಸಿಸಿಪಾಸ್ 7-6, 4-6, 6-4, 5-7, 6-7ರಿಂದ ಕ್ರೊವೇಷಿಯಾದ ಬೊರ್ನಾ ಕೊರಿಕ್ ವಿರುದ್ಧ ಆಘಾತ ಎದುರಿಸಿದರು. ಕೊರಿಕ್ ಸತತ 2ನೇ ಬಾರಿ 5 ಸೆಟ್‌ಗಳ ಹೋರಾಟದಲ್ಲಿ ಗೆಲುವು ಕಂಡರು.

ಒಸಾಕಾಗೆ ಪ್ರಯಾಸದ ಗೆಲುವು

ಮಾಜಿ ಚಾಂಪಿಯನ್ ನವೊಮಿ ಒಸಾಕಾ 3ನೇ ಸುತ್ತಿನಲ್ಲಿ ಮತ್ತೋರ್ವ ಯುವ ಆಟಗಾರ್ತಿ ಉಕ್ರೇನ್‌ನ ಮಾರ್ಟ ಕೊಸ್ಟ್‌ಯುಕ್ ವಿರುದ್ಧ 6-3, 6-7, 6-2ರಿಂದ ಪ್ರಯಾಸದ ಗೆಲುವು ದಾಖಲಿಸಿದರು. ಕ್ರೊವೇಷಿಯಾದ ಪೆಟ್ರಾ ಮಾರ್ಟಿಕ್, ಅಮೆರಿಕದ ಜೆನ್ನಿರ್ ಬ್ರಾಡಿ, ಶೆಲ್ಬಿ ರೋಜರ್ಸ್‌, ಇಸ್ಟೋನಿಯಾದ ಅನೆಟ್ ಕೊಂಟಾವೆಲ್ಟ್ 4ನೇ ಸುತ್ತಿಗೇರಿದ ಇತರ ಪ್ರಮುಖ ಆಟಗಾರ್ತಿಯರು.

ಕೆರ್ಬರ್, ಕ್ವಿಟೋವಾಗೆ ಸುಲಭ ಜಯ

2016ರ ಚಾಂಪಿಯನ್ ಏಂಜೆಲಿಕ್ ಕೆರ್ಬರ್ ಅಮೆರಿಕದ 20 ವರ್ಷದ ಆಟಗಾರ್ತಿ ಆನ್ ಲಿ ವಿರುದ್ಧ 6-3, 6-4ರಿಂದ ಸುಲಭ ಗೆಲುವು ದಾಖಲಿಸಿದರು. 2 ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಅಮೆರಿಕದ ಜೆಸ್ಸಿಕಾ ಪೆಗುಲ ವಿರುದ್ಧ 6-4, 6-3 ನೇರಸೆಟ್‌ಗಳಿಂದ ಜಯಿಸಿದರು.

2ನೇ ಸುತ್ತಿಗೇರಿದ ಬೋಪಣ್ಣ ಜೋಡಿ

ಕನ್ನಡಿಗ ರೋಹನ್ ಬೋಪಣ್ಣ ಮತ್ತು ಕೆನಡದ ಡೆನಿಸ್ ಶಪೊವಲೋವ್ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ 2ನೇ ಸುತ್ತಿಗೇರಿದ್ದು, ಭಾರತದ ಆಶಾಕಿರಣವನ್ನು ಜೀವಂತವಿಟ್ಟಿದೆ. ಶ್ರೇಯಾಂಕ ರಹಿತ ಬೋಪಣ್ಣ-ಶಪೊವಲೋವ್ ಜೋಡಿ ಮೊದಲ ಸುತ್ತಿನಲ್ಲಿ 6-2, 6-4ರಿಂದ ಅಮೆರಿಕದ ಇರ್ನೆಸ್ಟೊ ಎಸ್ಕೊಬೆಡೊ ಮತ್ತು ನೊಹಾ ರುಬಿನ್ ಜೋಡಿಯನ್ನು ಮಣಿಸಿತು.

6ನೇ ಶ್ರೇಯಾಂಕಿತ ಕೆವಿನ್ ಕ್ರವೆಟ್ಜ ಮತ್ತು ಆಂಡ್ರೆಸ್ ಮೈಸ್ ಜೋಡಿಯಿಂದ ಅವರಿಗೆ ಮುಂದಿನ ಸವಾಲು ಎದುರಾಗಲಿದೆ. ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಮತ್ತು ಡಬಲ್ಸ್‌ನಲ್ಲಿ ದಿವಿಜ್ ಶರಣ್ ನಿರ್ಗಮನದ ಬಳಿಕ ಬೋಪಣ್ಣ ಈಗ ಟೂರ್ನಿಯಲ್ಲಿ ಸವಾಲು ಉಳಿಸಿಕೊಂಡಿರುವ ಏಕೈಕ ಭಾರತೀಯರಾಗಿದ್ದಾರೆ.