ಕ್ರೀಡೆ

ಸೋಲು ಒಳ್ಳೆಯದೇ ಎಂದು ಟೀಕೆಗೆ ಗುರಿಯಾದ ಹಾರ್ದಿಕ್​ ಪಾಂಡ್ಯ

ಲಾಡೆರ್​ಹಿಲ್​: ಮುಂದಿನ ವರ್ಷ ವೆಸ್ಟ್​ ಇಂಡೀಸ್​&ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಸಿದ್ಧತೆ ದೃಷ್ಟಿಯಿಂದ ಮಹತ್ವದ್ದೆನಿಸಿದ ಸರಣಿಯಲ್ಲಿ ಭಾರತ ತಂಡ ಸೋಲು ಅನುಭವಿಸಿತು. ಆದರೆ ಕ್ರಿಕೆಟ್​ ಪ್ರೇಮಿಗಳಿಗೆ, ಭಾರತ ಟಿ20 ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಈ ಸೋಲಿನ ಬಳಿಕ ಹೇಳಿರುವ ಮಾತು ಇದಕ್ಕಿಂತ ಬೇಸರ ತಂದಿದೆ.

"ಕೆಲವೊಮ್ಮೆ ಸೋಲು ಒಳ್ಳೆಯದೇ ಆಗಿರುತ್ತದೆ. ಇದರಿಂದ ಸಾಕಷ್ಟು ಕಲಿಯಲು ಸಿಗುತ್ತದೆ. ಒಂದು ಸರಣಿ ಸೋಲಿನಿಂದ ಏನೂ ಆಗುವುದಿಲ್ಲ. ಗುರಿಯತ್ತ ನಮ್ಮ ಬದ್ಧತೆ ಮುಖ್ಯ. ಸೋಲು&ಗೆಲುವು ಇದರ ಭಾಗವಾಗಿರುತ್ತದೆ. ಇದರಿಂದ ನಾವು ಕಲಿತುಕೊಳ್ಳುವುದೇ ಮುಖ್ಯವಾದುದು' ಎಂದು ಹಾರ್ದಿಕ್​ ಪಾಂಡ್ಯ ಸರಣಿ ಸೋಲಿನ ಬಳಿಕ ಹೇಳಿದರು. ಆದರೆ ಹಾರ್ದಿಕ್​ ಪಾಂಡ್ಯ ಸೋಲನ್ನು ಈ ರೀತಿಯಾಗಿ ಒಪ್ಪಿಕೊಂಡಿರುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

"ಭಾರತ ತಂಡ ಮೊದಲ 10 ಓವರ್​ಗಳ ಬಳಿಕ ಲಯ ಕಳೆದುಕೊಂಡಿತು. ನಾನು ಕ್ರೀಸ್​ಗೆ ಇಳಿದಾಗ ಸರಾಗವಾಗಿ ರನ್​ ಗಳಿಸಲು ಸಾಧ್ಯವಾಗಲಿಲ್ಲ. ನಾನು ಸಮಯ ತೆಗೆದುಕೊಂಡೆ ಮತ್ತು ಸರಿಯಾಗಿ ಫಿನಿಶ್​ ಕೂಡ ಮಾಡಲಾಗಲಿಲ್ಲ' ಎಂದು ಹಾರ್ದಿಕ್​ ಪಾಂಡ್ಯ ಸೋಲಿಗೆ ತನ್ನನ್ನೂ ದೂರಿಕೊಂಡರು. ಒಂದೆಡೆ ಸೂರ್ಯಕುಮಾರ್​ ಬಿರುಸಿನ ಆಟವಾಡುತ್ತಿದ್ದ ನಡುವೆ ಹಾರ್ದಿಕ್​ 18 ಎಸೆತಗಳಲ್ಲಿ 14 ರನ್​ ಗಳಿಸಿ ನಿರಾಸೆ ಮೂಡಿಸಿದರು.